ಅನುದಿನ ಕವನ-೧೪೬೧, ಹಿರಿಯ ಕವಯಿತ್ರಿ: ಎಂ ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಸೊನ್ನೆಯಾಗುವ ಭಯವಿಲ್ಲ!

ಸೊನ್ನೆಯಾಗುವ ಭಯವಿಲ್ಲ!

ಬೆಳಕಿಗಾಗಿ ಹಾತೊರೆದು ಕೈ ಚಾಚುವ
ಮರದ ರೆಂಬೆ ಕೊಂಬೆಗಳಿಗೆ
ಅಕ್ಕಪಕ್ಕದ್ದನ್ನು ಮರೆಮಾಡುವ ಸಂಚುಗಳಿಲ್ಲ

ತಾನೇ  ಉರಿದು, ಬೆಳಕಿನಲ್ಲಿ ಮಿಂದು,
ಮಿಂಚುಗಣ್ಣ ಮಿಟುಕಿಸುವ ಚುಕ್ಕೆಗೆ
ನೆರೆಯವರ ಕತ್ತಲಾಗಿಸುವ ಗೋಜಿಲ್ಲ

ಬಾನಲ್ಲೇ ಚಿತ್ರ ಬರೆವ ಇಂದ್ರಚಾಪಕ್ಕೆ
ಹತ್ತಾರು ಬಣ್ಣದಲಿ ನಗುವ  ಹೂಗಳ
ಮೀರಿಸಿ ಮೆರೆವ ಹಂಗೇ ಇಲ್ಲ

ಬಂಡೆ, ಬೆಟ್ಟ, ಕೊರಕಲುಗಳಲ್ಲೂ
ತನ್ನ ಪಾಡಿಗೆ ತಾನು ಹರಿವ  ನದಿಗೆ
ಕಡಲ ಒಡಲಲ್ಲಿ ಸೊನ್ನೆಯಾಗುವ ಭಯವಿಲ್ಲ

(ಇಂದ್ರಚಾಪ-ಕಾಮನಬಿಲ್ಲು)

(ಈಚೆಗೆ ಫೋನ್ ಮಾಡಿದವರೊಬ್ಬರು  `ನೀವು ಯಾರೊಂದಿಗೂ ಪೈಪೋಟಿಗಿಳಿಯದೆ ನಿಮ್ಮ ದಾರಿಯಲ್ಲಿ ನೀವು ನಡೆಯುತ್ತಿರುತ್ತೀರ’ ಎಂದರು. `ಒಳಗೆ ಭಯ ತುಂಬಿದವರು ಮಾತ್ರ ಪೈಪೋಟಿಗೆ ಇಳಿಯುತ್ತಾರೇನೋ! ನಮ್ಮ ಪಾಲಿಗೆ ದೊರೆತ  ಕರ್ತವ್ಯವನ್ನು ನಿರ್ವಹಿಸುತ್ತಾ ಸುಮ್ಮನೆ ಸಾಗುವುದೇ ಹುಟ್ಟಿನ ಸಾರ್ಥಕತೆ ಎಂದು ಭಾವಿಸಿರುವುದರಿಂದ ನನಗದರ ಅಗತ್ಯವಿಲ್ಲವೇನೋ’ ಎಂದುಬಿಟ್ಟೆ! ಆಗ ಒಳಗೆ ಹುಟ್ಟಿದ  ಭಾವವೇ ಈ ಕವಿತೆ)

ಈ ಪೈಪೋಟಿಯ ಯುಗದಲ್ಲಿ `ಅಲ್ಲಮಪ್ರಭುವಿನ’ `ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ, ಧೀರರು ಅಲ್ಲ’ ವಚನವನ್ನು ಕೂಡ ನೆನಪಿಸಿಕೊಂಡೆ!

-ಎಂ ಆರ್ ಕಮಲ, ಬೆಂಗಳೂರು
—–