ಹೊಸ ವರುಷದ ಹೊಸ ಕವಿತೆ ‘ಮಗಳು’
ಮಲ್ಲಿಗೆ ಹೂ
ಪರಿಮಳದಂತೆ ನಿನ್ನ ನಗೆ
ಹೊಸ ವರುಷದ
ಹೊಸ ಹಾಡಿನ ಸಾಲು ನಿನ್ನ ನಗೆ…
ನೀ ಎನಗೆ ಸಂಭ್ರಮ
ಗರಿಗೆದರಿ ಹಬ್ಬಿದ ಮಳೆಬಿಲ್ಲು
ಬಾನ್ನೀಲಿಯಲ್ಲಿ ಕೊನೆಯಿಲ್ಲದ ಬಣ್ಣಗಳ ತೋರಣ
ತಿಳಿಗೊಳದಲ್ಲಿ ಕೊನೆ ಇರದಷ್ಟು
ಬಿಳಿ ಮುಗಿಲ ಜೊತೆಗೆ ಸಂಜೆಗೆಂಪು ಔತಣ
ಹೊಸ ವರುಷದ
ಹೊಸ ಹಾಡಿಗೆ ನಿನ್ನ ನಗೆ ದಿಬ್ಬಣ…
ಸೋಲು ಗೆಲುವಿನ ಲೆಕ್ಕಾಚಾರ ಕಳೆದು ಹೋಗಿದೆ
ನಿನ್ನ ಹುಟ್ಟಿನ ಜೊತೆಗೆ ಬೆಳಕು ಹರಿದಿದೆ
ಹೂವಿನಂತ ಮೊಗ ಹೊತ್ತು
ನೀ ನಗಲು ಭೂಮಿ ತಂಪು
ಬಿದಿರ ಕೊಳಲು ಗಾನ ಲಹರಿ
ನಿನ್ನ ಮಾತು ಕೇಳಲಿಂಪು
ನನ್ನ ಹೊಸ ವರುಷದ ಹಾಡಿಗದುವೆ ಅಚ್ಚರಿ…
ಹೊಸ ವರುಷದ ಹೊಸ ಹಾಡಿದು
ನಿನ್ನ ನಗೆ ಝೆಂಕಾರ
ಹಾಡಿದವೋ ಹಕ್ಕಿ ಸಾಲು
ಮಲೆಮಲೆಗಳ ಗಾಳಿ ಕೊಳಲು
ತಂಪಾಯಿತ ಉರಿ ಬಿಸಿಲು
ನೀ ನಡೆಯಲು ನಡು ಹಗಲು
ಮಂಕಾಯಿತು ಸೂರ್ಯನೊಡಲು
ಬಿಸಿಲಿಲ್ಲ ಬೇಗೆ ಇಲ್ಲ
ನೀನೀಗ ಹೊಸ ವರುಷದ ಹೊಸಹಾಡು…
-ಸಿದ್ದು ಜನ್ನೂರ್, ಚಾಮರಾಜನಗರ
—–