ಅನುದಿನ ಕವನ-೧೪೬೩, ಹಿರಿಯ ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಕೊರಗು ನನ್ನ‌ ಸ್ವತ್ತು….

ಕೊರಗು ನನ್ನ ಸೊತ್ತು……

ನೋಡ್ತಿದ್ದೆ ಈಗೀಗ ಬುದ್ಧಿಯ
ತಳಮಳ ಚಡಪಡಿಕೆ ಅಡಿಗಡಿಗೆ
ಬಲು ನಿರ್ಲಿಪ್ತ ಮನದ ಮೊಗ
ಬಲು ನಿಶ್ಯಬ್ದ ಮೌನ ತಳವಿಲ್ಲದು
ಮೌನ ಕೆದರಿ ಕೆದಕದೆ ನಾನೂ

ಹುಯಿಲು ಒಮ್ಮೆಲೆ ಮನವರಳಿ
ಇದೇನು ಕಿರಿಚಾಟ ಕುಣಿದಾಟ
ನಿಶ್ಯಬ್ದ ತುಂಬ ಶಬ್ದ ಗೊಂದಲ
ವೇದಾಂತಿ ಕಳೆ ಮೊಗದಿಂಚಿಂಚಿಗೆ
ಹೇಳಿತು ಮನ ಅನುಮಾನ ದೂಡಿ

ಇಗೋ ಕೇಳು ಇದು ಪಕ್ಕಾ ನಕ್ಕಿ
ಬರಲೆ ಬೇಕಲ್ಲ ಆ ಒಂದು ಗಳಿಗೆ
ಬೆಸೆದ ಬೆಸೆವ ಕೊಂಡಿ ಕಳಚೋದು
ಅರಿತೆ ಆ ನಡೆ ಮತ್ತೇನು ಹೇಳು
ಬಲು ಗಾಢ ಮೌನದಡಿ ಈಗ ನಾ

ಕರಳು ಹಿಂಡಿ ನೋವಿನಲೆ ತೇಲಿ
ತಡೀದೆ ನೋಡೆ ಬುದ್ಧಿಯ ಕಾತರದಿ
ನೋಟ ಎಲ್ಲೊ ಮೊಗ ಅಪರಿಚಿತ
ಓ ದಾರ್ಶನಿಕರಿಬ್ಬರೂ, ಮೊದ್ದು ನೀ
ಕೇಳು, ಇಲ್ಲ ದಾರಿ ನೀನಾಗು ಬುದ್ಧ

ಹೇಳಿ ಬಿಟ್ಟೆ ಕೊರಗು ನನ್ನ ಸೊತ್ತು
ಭದ್ರ ನನ್ನೆದೆ ಗೂಡು ಬೇಡಾರ ಹಂಗು
ಬಡಬಡನೆ ತುರುಕಿದೆ ಬಿಡದೆ ಸಂದು
ಇದೊಂದೆ ಸಂಗಾತಿ ಕೊನೆವರೆಗೂ
ತಿಳ್ಕೊಳ್ಳಿ! ಈಗ ಮೌನ ಅವೆರಡೂ!


-ಸರೋಜಿನಿ ಪಡಸಲಗಿ
ಬೆಂಗಳೂರು
—–