ದೇಶದ ಮೊದಲ ಶಿಕ್ಷಕಿಯನ್ನು ಕೃತಜ್ಞತೆಯಿಂದ ನೆನೆಯೋಣ -ಡಾ. ನಟರಾಜ ಹುಳಿಯಾರ್, ಹಿರಿಯ ಚಿಂತಕರು, ಬೆಂಗಳೂರು

ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ನಡೆದ ಸಿಪಾಯಿ ದಂಗೆಯ ಬಗ್ಗೆ ಚರಿತ್ರಕಾರರು ಮತ್ತೆ ಮತ್ತೆ ಬರೆಯುತ್ತಾರೆ. ಆದರೆ ಅದೇ ದಶಕದಲ್ಲಿ ಭಾರತದಲ್ಲಿ ನಡೆದ ವಿಶಿಷ್ಟ ಶಿಕ್ಷಣಕ್ರಾಂತಿಯ ಬಗ್ಗೆ ಚರಿತ್ರಕಾರರು ಮಾತಾಡಿದ್ದು ಕಡಿಮೆ. ಆ ಶತಮಾನದ ಐವತ್ತರ ದಶಕದಲ್ಲಿ ಹುಡುಗಿಯರನ್ನು ಶಾಲೆಗೆ ಕಳಿಸುವ ಬಗ್ಗೆ ಇಂಗ್ಲೆಂಡಿನ ಸಮಾಜವಿನ್ನೂ ಹಿಂದೆ ಮುಂದೆ ನೋಡುತ್ತಿತ್ತು.

ಆದರೆ ಆ ಕಾಲಕ್ಕಾಗಲೇ ಭಾರತದ ಮುಖ್ಯ ಸುಧಾರಕರಾದ ಮಹಾತ್ಮ *ಜೋತಿಬಾ ಫುಲೆ* ಅವರು ಸ್ವಾತಂತ್ರ್ಯ ಹೋರಾಟವನ್ನು ಸಾಮಾಜಿಕ ಸ್ವಾತಂತ್ರ್ಯದ ಹೋರಾಟವನ್ನಾಗಿ ಪರಿವರ್ತಿಸತೊಡಗಿದ್ದರು. ಅದೇ ಆಗ ಹದಿಹರೆಯಕ್ಕೆ ಕಾಲಿಡುತ್ತಿದ್ದ ಪತ್ನಿ *ಸಾವಿತ್ರಿ ಬಾಯಿಗೆ* ಅಕ್ಷರ ಕಲಿಸಲು ಶುರು ಮಾಡಿದ್ದರು.

ಹೀಗೆ ಆಕಸ್ಮಿಕವಾಗಿ ತನ್ನ ‘ಎದೆಗೆ ಬಿದ್ದ ಅಕ್ಷರ’ದ ಫಲವಾಗಿ ಸಾವಿತ್ರಿ ಬಾಯಿ ಅವರು, ೧೮೫೧ರಲ್ಲಿ ಜೋತಿಬಾ ಫುಲೆ ಎಲ್ಲ ಜಾತಿಯ ಹುಡುಗಿಯರಿಗಾಗಿ ತೆರೆದ ಮೊದಲ ಶಾಲೆಯಲ್ಲಿ ಭಾರತದ ಮೊದಲ ಶಿಕ್ಷಕಿಯಾಗುತ್ತಾರೆ. ಮಾವ ಈ ಕೆಲಸ ಬಿಡುವಂತೆ ಸಾವಿತ್ರಿ ಅವರಿಗೆ ತಾಕೀತು ಮಾಡುತ್ತಾರೆ. ಜೋತಿಬಾಗೆ ಶಾಲೆ ಮುಚ್ಚಲು ಹೇಳುತ್ತಾರೆ.

ಹುಡುಗಿಯರು ಅಕ್ಷರ ಕಲಿತರೆ ಗಂಡಂದಿರು ಸಾಯುತ್ತಾರೆ ಎಂದು ಸನಾತನಿಗಳು ಎಲ್ಲೆಡೆ ಪತ್ರ ಬರೆದು ಹೆದರಿಸುತ್ತಾರೆ. ಸಾವಿತ್ರಿ ಹಾಗೂ ಜೋತಿಬಾ ಮನೆ ಬಿಟ್ಟು ಹೊರಬರಬೇಕಾದ ಸನ್ನಿವೇಶ ನಿರ್ಮಾಣವಾಗುತ್ತದೆ. ಸಾವಿತ್ರಿ ಶಾಲೆಗೆ ಹೊರಟರೆ, ಸಾಂಪ್ರದಾಯಿಕರು ಆಕೆಯ ಮೇಲೆ ಸೆಗಣಿ ಎರಚುತ್ತಾರೆ. ಅದಕ್ಕೆಲ್ಲ ಜಗ್ಗದ ಆಕೆ, ಫುಲೆ ಅವರ ಸಲಹೆಯಂತೆ ಶಾಲೆಗೆ ಹೋಗುವಾಗ ಹಳೆಯ ಸೀರೆ ಉಟ್ಟು, ಶಾಲೆ ತಲುಪಿದ ಮೇಲೆ ಹೊಸ ಸೀರೆ ಉಟ್ಟು ಹುಡುಗಿಯರಿಗೆ ಪಾಠ ಹೇಳಿಕೊಡುತ್ತಾರೆ.

ಆ ಶಾಲೆಯಲ್ಲಿ ಕಲಿತ ಮೊದಲ ಮಾತಂಗ ಜಾತಿಯ ಧನ್ಯಾಬಾಯಿ ಎಂಬ ಹುಡುಗಿ ೧೮೫೫ರಲ್ಲಿ ಮರಾಠಿ ಪತ್ರಿಕೆಯೊಂದರಲ್ಲಿ ಬರೆದ ಬರಹ ಈ ಮೌನಕ್ರಾಂತಿಯ ಚಾರಿತ್ರಿಕ ಮಹತ್ವಕ್ಕೆ ಸಾಕ್ಷಿಯಂತಿದೆ. ‘ನಾವು ಮನೆಗಳ ಕೆಳಗೆ ಹೂತು ಹೋಗಿದ್ದೆವು. ಹಿಂದೆ ನಮಗೆಲ್ಲ ಓದಲು ಬರೆಯಲು ಬಿಡುತ್ತಿರಲಿಲ್ಲ. ಆದರೆ ಈಗ ಯಾರೂ ನಮ್ಮನ್ನು ಬೈಯಲಾರರು. ಜೀವಂತ ಸುಡಲಾರರು. ನಾವೀಗ ಬಟ್ಟೆ ತೊಡಬಹುದು; ಪೇಟೆಗೆ ಹೋಗಬಹುದು’.

ಸಾವಿತ್ರಿ ಬಾಯಿ ಅವರ ಅಕ್ಷರಕ್ರಾಂತಿ ಇಲ್ಲಿಗೇ ನಿಲ್ಲುವಂತಿರಲಿಲ್ಲ. ಶಿಕ್ಷಕಿಯಾದ ಮರುವರ್ಷವೇ ‘ಮಹಿಳಾ ಸೇವಾಮಂಡಳ’ ರೂಪಿಸಿದರು. ಜೋತಿಬಾ ಮತ್ತು ಸಾವಿತ್ರಿ ಆ ಮೂರು–ನಾಲ್ಕು ವರ್ಷದ ಅವಧಿಯಲ್ಲಿ ಶೂದ್ರರು, ದಲಿತರಿಗಾಗಿ ಹದಿನೆಂಟು ಶಾಲೆಗಳನ್ನು ತೆರೆದರು. ಈ ಪ್ರಯತ್ನಗಳಿಗೆ ವಿರೋಧಗಳೂ ಮುಂದುವರಿದವು. ‘ಅಸ್ಪೃಶ್ಯರಿಗೆ ವಿದ್ಯೆ ಕಲಿಸಿ ನೀನೂ ನಿನ್ನ ಪತಿಯೂ ಸಮಾಜದಲ್ಲಿ ಅಸ್ಪೃಶ್ಯರಾಗಿದ್ದೀರಿ’ ಎಂದು ಸಾವಿತ್ರಿಯ ಅಣ್ಣನೇ ಖಂಡಿಸತೊಡಗಿದ. ಆಗ ಸಾವಿತ್ರಿ, ‘ನಾಗರಹಬ್ಬದ ದಿನ ವಿಷ ಕಕ್ಕುವ ಹಾವುಗಳನ್ನು ಹಿಡಿದು ಹಾಲೆರೆದು ಪೂಜಿಸುತ್ತೀರಿ; ಆದರೆ ಮಹರ್ ಹಾಗೂ ಮಾಂಗ್ ಜಾತಿಯ ಮನುಷ್ಯರನ್ನು ಅಸ್ಪೃಶ್ಯರಾಗಿಸಿದ್ದೀರಲ್ಲ?’ ಎಂದು ಅವನ ಕಣ್ಣು ತೆರೆಸಲೆತ್ನಿಸಿದರು. ಸಾವಿತ್ರಿ ಬಾಯಿ ಈ ಬಗ್ಗೆ ಜೋತಿಬಾಗೆ ಬರೆಯುತ್ತಾ ‘ಎಂಥ ಕಷ್ಟ ಬಂದರೂ ನಾವು ನಮ್ಮ ಹಾದಿಯಿಂದ ಕದಲಬಾರದು; ನಾಳೆ ನಮ್ಮದು’ ಎಂದದ್ದು ಇವತ್ತಿಗೂ ನನ್ನಂಥವರಲ್ಲಿ ಸ್ಫೂರ್ತಿ ಹುಟ್ಟಿಸುತ್ತದೆ.

ಭಾರತದ ಪ್ರಥಮ ಮುದ್ರಿತ ಕವನ ಸಂಕಲನ ಎನ್ನಲಾದ ‘ಕಾವ್ಯ ಫುಲೆ’ ಸೇರಿದಂತೆ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ ಸಾವಿತ್ರಿ ಬಾಯಿ, ಕಾವ್ಯವನ್ನು ಜಾತಿ ಪದ್ಧತಿ ಹಾಗೂ ಮನುಧರ್ಮಶಾಸ್ತ್ರದ ವಿರುದ್ಧ ಅಸ್ತ್ರವಾಗಿ ಬಳಸಿದರು.ತಮ್ಮ ಮನೆಯ ಬಾವಿಯನ್ನು ದಲಿತರಿಗೂ ತೆರೆದರು.

೧೮೬೦ರಲ್ಲಿ ವಿಧವೆಯರ ತಲೆ ಬೋಳಿಸುವುದನ್ನು ವಿರೋಧಿಸಲು ಕ್ಷೌರಿಕರನ್ನು ಸಂಘಟಿಸಿದರು. ದಲಿತ ಹುಡುಗಿ ಮತ್ತು ಬ್ರಾಹ್ಮಣ ಹುಡುಗನ ಪ್ರೇಮವಿವಾಹಕ್ಕೆ ಇಂಬಾಗಿ ನಿಂತರು. ವಿಧವಾವಿವಾಹ ಕುರಿತು ಎಲ್ಲೆಡೆ ಅರಿವು ಮೂಡಿಸಿದರು. ವೇಶ್ಯೆಯರ, ವಿಧವೆಯರ ಮಕ್ಕಳು ಅವರಲ್ಲಿ ಆಸರೆ ಪಡೆದರು. ಜೋತಿಬಾ ನಿರ್ಗಮನದ ನಂತರ ಸತ್ಯಶೋಧಕ ಸಮಾಜದ ಸಾಮಾಜಿಕ ಚಳವಳಿಯನ್ನೂ ಮುಂದುವರಿಸಿದ ಸಾವಿತ್ರಿ ಬಾಯಿ, ಪ್ಲೇಗಿಗೆ ತುತ್ತಾದ ರೋಗಿಗಳ ಆರೈಕೆ ಮಾಡುತ್ತಿರುವಾಗ ಪ್ಲೇಗಿನ ಸೋಂಕು ತಗುಲಿ ೧೦ ಮಾರ್ಚ್ ೧೮೯೭ರಂದು ತೀರಿಕೊಂಡರು.

ಸಾವಿತ್ರಿ ಬಾಯಿ ಮತ್ತು ಜೋತಿಬಾ ಅವರ ಶಿಕ್ಷಣದ ಕೇಂದ್ರದಲ್ಲಿ ಮಹಿಳೆ ಹಾಗೂ ಶೂದ್ರಾತಿಶೂದ್ರರಿದ್ದರು. ಸಂಸ್ಕೃತಿಯ ಬದಲಾವಣೆಗೆ ಸ್ತ್ರೀಯರ ಮಾನಸಿಕ ಪರಿವರ್ತನೆ ಅತ್ಯಂತ ಮುಖ್ಯ ಎಂಬ ಬಗ್ಗೆ ಇಬ್ಬರಿಗೂ ಸ್ಪಷ್ಟತೆಯಿತ್ತು. ಇಂಥದೊಂದು ಮಹತ್ವದ ಕ್ರಾಂತಿ ಗಂಡಹೆಂಡತಿ ನಡುವಣ ಅದ್ಭುತ ಸಂಬಂಧದ ಮೂಲಕ ಆದದ್ದು ಕೂಡ ಗಮನಾರ್ಹ. ಮುಂದೊಮ್ಮೆ ಅಂಬೇಡ್ಕರ್ ಅವರು ಬುದ್ಧ, ಕಬೀರರ ಜೊತೆಗೆ ಜೋತಿಬಾ ಫುಲೆ ಅವರನ್ನೂ ತಮ್ಮ ಗುರುವೆಂದು ಕರೆದದ್ದು ಆಶ್ಚರ್ಯವಲ್ಲ. ಬಾಬಾಸಾಹೇಬರು ಸಮಾಜವನ್ನು, ಶಿಕ್ಷಣದ ವ್ಯಾಪ್ತಿಯನ್ನು ಗ್ರಹಿಸಿದ ರೀತಿಯಲ್ಲೂ ಜೋತಿಬಾ ಚಿಂತನೆಗಳ ಪ್ರೇರಣೆಗಳಿದ್ದವು.

ಈಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ದಲಿತ ಸಂಘಟನೆಗಳು ಹಾಗೂ ಬಹುಜನ ಸಮಾಜ ಪಕ್ಷ, ಸಾವಿತ್ರಿ ಬಾಯಿ ಹಾಗೂ ಜೋತಿಬಾ ಫುಲೆ ಅವರನ್ನು ಆಗಾಗ್ಗೆ ನೆನೆಸಿಕೊಳ್ಳುತ್ತಾ ಬಂದಿವೆ. ಕಳೆದ ಹದಿನೈದು ವರ್ಷಗಳಿಂದ ಕರ್ನಾಟಕ ಸರ್ಕಾರ, ಬಾಲಕಿಯರಿಗೆ ಹದಿನೆಂಟು ವರ್ಷವಾಗುವವರೆಗೆ ಒದಗಿಸುತ್ತಿರುವ ಉಚಿತ ಶಿಕ್ಷಣ ಯೋಜನೆಯ ಹಿಂದೆ ಸಾವಿತ್ರಿ ಬಾಯಿ ಅಂತಹವರ ಸ್ಫೂರ್ತಿಯೂ ಇದೆ.

ಕನ್ನಡದಲ್ಲಿ ಸಮತಾ ದೇಶಮಾನೆ ಹಾಗೂ ಇನ್ನಿತರರ ಕೆಲವು ಪುಸ್ತಕಗಳಲ್ಲಿ, ಸಂಶೋಧನಾ ಪ್ರಬಂಧಗಳಲ್ಲಿ ಸಾವಿತ್ರಿ ಬಾಯಿ ಅವರ ಮಹತ್ವವನ್ನು ಚರ್ಚಿಸಲಾಗಿದೆ. ಈ ಅಧ್ಯಯನಗಳು ಇನ್ನೂ ಆಳವಾಗಿ ನಡೆದು ಸಾವಿತ್ರಿ ಬಾಯಿ ಅವರ ಜೀವನದ ಸಾರ್ಥಕತೆ ನಮ್ಮನ್ನು ತಟ್ಟಬೇಕಾಗಿದೆ. ಭಾರತದ ಸ್ತ್ರೀವಾದವನ್ನು ಸಾವಿತ್ರಿ ಬಾಯಿ ಅಂತಹವರ ಹೋರಾಟದ ತಳಹದಿಯ ಮೇಲೆ ಕಟ್ಟಿ ಹೊಸ ರೀತಿಯ ಸ್ತ್ರೀವಾದವನ್ನು ರೂಪಿಸಿಕೊಳ್ಳುವ ಅಗತ್ಯವೂ ನಮ್ಮೆದುರಿಗಿದೆ.

ಇಂದು ಸಾವಿತ್ರಿ ಬಾಯಿ ಅವರ ಇಡೀ ಶಿಕ್ಷಣ ಪ್ರಯಾಣ ಹಲವು ಸಂದೇಶಗಳನ್ನು ಹೊರಡಿಸುತ್ತದೆ. ಭಾರತದಲ್ಲಿ ಇದೀಗ ಅಕ್ಷರ ಕಲಿಯಹೊರಟಿರುವ ಮೊದಲ ತಲೆಮಾರಿನ ಹುಡುಗ, ಹುಡುಗಿಯರಿದ್ದಾರೆ. ಅಂಥವರಿಗೆ ಸಾವಿತ್ರಿ ಬಾಯಿ ಅವರ ರೀತಿಯ ಬದ್ಧತೆಯಿಂದ ವಿದ್ಯೆ ಕಲಿಸಬೇಕಾದ ಜರೂರು ನಮ್ಮೆದುರಿಗಿದೆ. ಈಗ ಸರ್ಕಾರಿ ವಲಯದಲ್ಲಿ ಪ್ರೈಮರಿ ಶಿಕ್ಷಣದ ಅರ್ಧ ಭಾಗ ಹಾಗೂ ಖಾಸಗಿ ಶಿಕ್ಷಣದಲ್ಲಿ ಬಹುತೇಕ ಭಾಗ ಬೋಧನೆಯ ಜವಾಬ್ದಾರಿ ಮಹಿಳೆಯರ ಕೈಯಲ್ಲಿದೆ.

ಈ ಮಹತ್ವದ ಅಂಶವನ್ನು ಶಿಕ್ಷಣವನ್ನು ಸಮಾಜ ಬದಲಾವಣೆಯ ಸಾಧನವನ್ನಾಗಿ ಕಾಣುವ ಎಲ್ಲರೂ ಆಳವಾಗಿ ಗ್ರಹಿಸಬೇಕು. ಈ ಶಿಕ್ಷಕಿಯರು ನಿಜವಾದ ಅರ್ಥದಲ್ಲಿ ಶಿಕ್ಷಣ ಪಡೆದು ಪಾಠ ಮಾಡತೊಡಗಿದರೆ, ಮಕ್ಕಳ ತಲೆಯಲ್ಲಿರುವ ಹಲವು ವಿಕಾರಗಳನ್ನು ಹೊಡೆದೋಡಿಸಬಹುದು. ನಮ್ಮ ಪ್ರೈಮರಿ ಶಿಕ್ಷಕ ಶಿಕ್ಷಕಿಯರಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೂ ಇರುವ ಶಿಕ್ಷಕವರ್ಗ ಕ್ರಾಂತಿಜ್ಯೋತಿ ಸಾವಿತ್ರಿ ಬಾಯಿ ಅವರ ಜೀವನದ ಎಳೆಯಿಂದ ಸ್ವಲ್ಪವಾದರೂ ಸ್ಫೂರ್ತಿ ಪಡೆದರೆ ನಮ್ಮ ಶಿಕ್ಷಣಲೋಕದ ಬಗೆಬಗೆಯ ಬೇಜವಾಬ್ದಾರಿತನಗಳು ಎಷ್ಟೋ ಕಡಿಮೆಯಾಗಬಲ್ಲವು.

-ಡಾ.ನಟರಾಜ‌ ಹುಳಿಯಾರ್, ಬೆಂಗಳೂರು
—–