ಅವ್ವ
ಮರವಾಗಿ ಚಿಗಿತಿದ್ದಾಳೆ
ಮೈತುಂಬಾ ಹೂಬಿಟ್ಟು ನಳನಳಿಸುತ್ತಿದ್ದಾಳೆ
ಎಸೆದ ಕಲ್ಲುಗಳ
ಕಟ್ಟೆಯಾಗಿಸಿದಳು
ತೂರಿದ ಮಣ್ಣುಗಳ
ಬುಡವಾಗಿಸಿದಳು
ಎರಚಿದ ಸಗಣಿಯ
ಸಾರವಾಗಿಸಿದಳು
ಅವ್ವ
ಸಾವಿತ್ರವ್ವ
ಬಿತ್ತಿದ ಬಿತ್ತುಗಳಿಗೆ
ತಿಳಿವಿನ ನೀರುಣಿಸಿ
ಮರದ ಎಲೆ ಎಲೆಯಲ್ಲೂ
ಅವಳ ಮಕ್ಕಳು
ಮೊಮ್ಮಕ್ಕಳು, ಮರಿಮಕ್ಕಳು
ಮರಿ ಮರಿ ಮರಿ ಮಕ್ಕಳು
ಹೂ ಬಿಡುವರು
ನಳ ನಳಿಸುವರು
ಬಿತ್ತ ಬಿತ್ತುವರು
-ಸಬಿತಾ ಬನ್ನಾಡಿ, ಕುಂದಾಪುರ