ನೀ ಕಲಿಯುಗದ ‘ರಾಧೆ’
ನೀ ಪೂಜ್ಯಳಾಗುವುದಿಲ್ಲ
ನಿನ್ನ ಪ್ರೇಮ ಎಷ್ಟೇ ಅಲೌಕಿಕ
ಮತ್ತು ನೈತಿಕವಾದರೂ
ದೈಹಿಕವಾಗಿ ಅಳೆಯಲಾಗುವುದು
ನೀ ಸ್ನೇಹ ಬಯಸುವುದಾದರೆ
ಅವ ಪ್ರೇಮ ಬಯಸುವ,
ನೀ ನಿನ್ನಾತ್ಮವನೇ ಸಮರ್ಪಿಸಿದರೂ
ಅವ ದೇಹಾಘಾತ ನೀಡುವ
ಸಂಪೂರ್ಣ ಸಮರ್ಪಿತಳಾದರೂ
ನೀ ರಾಧೆಯೇ ಹೊರತು
ರುಕ್ಮಣಿ ಆಗುವುದೇ ಇಲ್ಲ
ಆ ಕಾಲ ಬೇರೆ
ಈ ಕಾಲ ಬೇರೆ
ಅಂದು ‘ರಾಧೆ’
ಪೂಜ್ಯಳು
ಇಂದು ‘ರಾಧೆ’ ಹೇಯಳು
ನೀ ಎಂದಿಗೂ ವಿಕಲ್ಪಳೇ ಆಗಿರುವೆ
ಪ್ರಾಮುಖ್ಯಳಾಗುವುದೇ ಇಲ್ಲ
ಒಬ್ಬ ಪುರುಷನಾಗಿ
ಹೆಣ್ಣಿನ ಸ್ನೇಹದ ಮಿತಿ ಅರಿತು
ನಿಸ್ವಾರ್ಥ ಪ್ರೇಮದಿ ಪೋಷಿಸುವ
ಸಮಾಜದ ಕ್ರೂರ ದೃಷ್ಠಿಗಳಿಂದ ಕಾಯುವ
ಹೃದಯದಲ್ಲಿ ಅನುಕ್ಷಣ ನಿನ್ನಿರಿಸುವ
ಆ ಗೆಳೆಯನ ಎಲ್ಲಿಂದ ತರುವೆ
ಆ ಕೃಷ್ಣನ ಎಲ್ಲಿಂದ ತರುವೆ
ನೀ ಕಲಿಯುಗದ ‘ರಾಧೆ’
ನೀ ಪೂಜ್ಯಳಾಗುವುದೇ ಇಲ್ಲ
-ಇಂಧು ಕೊತ್ವಾಲ್
ಕನ್ನಡಕ್ಕೆ :ಮಂಜುಳ ಕಿರುಗಾವಲು, ಮಂಡ್ಯ