ಕೊಪ್ಪಳ, ಜ.4 : ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವಲ್ಲಿ ಪತ್ರಿಕೋದ್ಯಮ ನಿರಂತರ ಪ್ರಯತ್ನ ಮಾಡುತ್ತದೆ ಎಂದು ಪತ್ರಕರ್ತ ಶ್ರೀಕಾಂತ್ ಅಕ್ಕಿ ಅವರು ಹೇಳಿದರು.
ಇಲ್ಲಿನ ಕೊಪ್ಪಳ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಶನಿವಾರ ಆಯೋಜಿಸಿದ್ದ ಸುದ್ದಿ ಬರವಣಿಗೆ ಹಾಗೂ ಪತ್ರಿಕೋದ್ಯಮದಲ್ಲಿ ಛಾಯಾಚಿತ್ರದ ಮಹತ್ವದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಇದರಿಂದ ನಿಮ್ಮ ಬರವಣಿಗೆ ರೂಢಿಸಿಕೊಳ್ಳಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಬರವಣಿಗೆ ರೂಢಿಸಿಕೊಂಡರೆ ನಿಮ್ಮ ವ್ಯಕ್ತಿತ್ವವನ್ನು ಬೆಳೆಸುತ್ತದೆ. ಬರವಣಿಗೆಯ ಮೂಲಕ ಪತ್ರಕರ್ತರು, ಸಾಹಿತಿ, ಕವಿ, ಲೇಖಕರಾಗಬಹುದು ಹಾಗೂ ಪತ್ರಿಕೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ. ಯುವ ಪತ್ರಕರ್ತರು ಸಮಾಜಕ್ಕೆ ಬೇಕಾಗಿದೆ ಎಂದರು.
ಪತ್ರಿಕೋದ್ಯಮದಲ್ಲಿ ಸತತ ಓದು, ಬರವಣಿಗೆಯಿಂದ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ. ಪತ್ರಿಕೋದ್ಯಮ ಎಂಬುದು ಪವಿತ್ರವಾದ ವೃತ್ತಿಯಾಗಿದ್ದು ಪತ್ರಕರ್ತರು ಸಮಾಜಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು. ನಂತರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕನ್ನಡ ವಿಭಾಗದ ಉಪನ್ಯಾಸಕ ಪ್ರವೀಣ ಪೋಲಿಸ್ ಪಾಟೀಲ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಸಂತೋಷಕುಮಾರ, ಶ್ರೀಕಾಂತ್ ಹಾಗೂ ವಿದ್ಯಾರ್ಥಿಗಳು ಇದ್ದರು.