ಬಳ್ಳಾರಿ, ಜ.4: ಮೌಲ್ಯಧಾರಿತ ಜೀವನ ರೂಪಿಸಿಕೊಳ್ಳುವಲ್ಲಿ ನಾಟಕಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಸಂಸದ ಇ. ತುಕಾರಾಂ ಅವರು ಹೇಳಿದರು.
ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ
ಆಯೋಜಿಸಿರುವ ಎರಡು ದಿನಗಳ
ಬಳ್ಳಾರಿ ಜಿಲ್ಲಾ ಕಲಾ ವೈಭವ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದರ ಕ್ಷೇಮಾಭಿವೃದ್ಧಿ ಮತ್ತು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಸ್ಥಾಪಿಸಿರುವುದು ಉತ್ತಮ ನಡೆ ಎಂದು ತಿಳಿಸಿದರು.
ಕಲಾವಿದರ ಸಂಘಕ್ಕೆ 5 ಲಕ್ಷ ರೂ. ಆರ್ಥಿಕ ಸಹಾಯ ಮಾಡುವುದಾಗಿ ಘೋಷಿಸಿ, ಪ್ರತಿವರ್ಷ ಹೆಸರಾಂತ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂದರು.
ಅರಿವು ಸಂಘಟನೆಯ ಎಸ್.ಪನ್ನಾ ರಾಜ್ ಅವರು ಮಾತನಾಡಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಾಧಕರನ್ನು ಸನ್ಮಾನಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಮುಖ್ಯ ಅತಿಥಿ ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರ ಮುಲ್ಲಂಗಿ ನಂದೀಶ್ ಅವರು, ಹಿರಿಯ ಕಲಾವಿದರನ್ನು ನಾವು ನೆನೆಯ ಬೇಕು. ಹಿರಿಯ ರಂಗಕಲಾವಿದರ ನಾಟಕಗಳನ್ನು ನೋಡಿ ಹಲವಾರು ಯುವ ಕಲಾವಿದರು ರಂಗಭೂಮಿಗೆ ಬರುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.
ಸ್ವಾಗತ ಭಾಷಣ ಮಾಡಿದ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ,
ಸರಕಾರದಿಂದ ಪ್ರತಿ ತಿಂಗಳು ಹಿರಿಯ ಕಲಾವಿದರಿಗೆ ನೀಡಲಾಗುತ್ತಿರುವ ಮಾಶಾಸನ ಅವರ ಜೀವನೋಪಾಯಕ್ಕೆ ಸಾಕಾಗುತ್ತಿಲ್ಲ. ಮಾಶಸನವನ್ನು ಹೆಚ್ಚಿಸುವ ಮೂಲಕ ಅರ್ಹ ಕಲಾವಿದರಿಗೆ ಸಹಾಯಮಾಡಬೇಕು ಎಂದು ಸರಕಾರವನ್ನು ಕೋರಿದರು.
ಕಾರ್ಯಕ್ರಮದಲ್ಲಿ ಬೂಡಾ ಅದ್ಯಕ್ಷ ಜೆ ಎಸ್ ಅಂಜನೇಯುಲು, ಮಹಮ್ಮದ್ ರಫಿ, ಮಸೀದಿಪುರ ಸಿದ್ದರಾಮನ ಗೌಡ, ಮೀನಳ್ಳಿ ಚಂದ್ರಶೇಖರ, ತಿಮ್ಮನ ಗೌಡ, ಚಾನಾಳ್ ಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ ನಾಗರಾಜ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆದೋನಿ ವೀಣಾ, ರಮೇಶ್ ಗೌಡ ಪಾಟೀಲ್, ಪಾಂಡುರಂಗಪ್ಪ, ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ, ಖಜಾಂಚಿ ರಮಣಪ್ಪ ಭಜಂತ್ರಿ, ಜಂಟಿ ಕಾರ್ಯದರ್ಶಿಗಳಾದ ಸುಬ್ಬಣ್ಣ, ವೀರೇಶ ದಳಾವಾಯಿ, ನಾಗನ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಆಕರ್ಷಕ ಮೆರವಣಿಗೆ: ಕಾರ್ಯಕ್ರಮಕ್ಕೆ ಮುನ್ನ ನಗರದ ರಾಘವ ಕಲಾಮಂದಿರದಿಂದ ಡಾ.ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಕಲಾತಂಡಗಳ ವೈಭವದ ಮೆರವಣಿಗೆಗೆ ಮೇಯರ್ ಮುಲ್ಲಂಗಿ ನಂದೀಶ್ ಅವರು ಚಾಲನೆ ನೀಡಿದರು.
ನಾಡಗೀತೆಯನ್ನು ಗಾಯಕರಾದ ಎಮ್ಮಿಗನೂರು ಜಡೇಶ, ಹನುಮಯ್ಯ, ಚಿಗುರು ಹುಲುಗಪ್ಪ, ಸುಂಕಣ್ಣ ಹಾಡಿದರು. ಸಂಘಟಕ ವಿನೋದ್ ನಿರೂಪಿಸಿದರು.
—–