ಅನುದಿನ ಕವನ-೧೪೬೬, ಕವಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಇಳಕಲ್, ಕವನದ ಶೀರ್ಷಿಕೆ:ಅವನೆಂದೂ ಕವಿತೆಯಾಗಲಾರ

ಅವನೆಂದೂ ಕವಿತೆಯಾಗಲಾರ

ನನ್ನಂತೆ ಪ್ರೀತಿಸುವ
ಪ್ರೀತಿಯ ಧಾರೆಯನ್ನೆ ಹರಿಸುವ
ತಾ ಕವಿಯಾಗಿ ಖುಷಿಯಿಂದ
ನನ್ನ ಕವಿತೆಯಾಗಿಸುತಲಿರುವ
ಆದರೂ ಅವ ಎಂದೂ ಕವಿತೆಯಾಗಲಾರ

ಉಕ್ಕುಕ್ಕಿ ಬರುವ ಭಾವಗಳ
ಹೆಕ್ಕಿ ಹೆಕ್ಕಿ ತೋರಿಸುತಿರುವ
ಕ್ಷಣ ಕಾಲ ಅಗಲಿ ಇರೆನೆಂದು
ಗುಕ್ಕುತಲೆ ತಡವರಿಸುತಿರುವ
ಆದರೂ ಕವಿತೆಯಾಗಲಾರ

ಹಗಲಿರುಳು ನೆನೆ ನೆನೆದು
ನಿದ್ದೆಯನೆ ಮರೆತಿರುವ
ಹೆಸರಿನ ಜಪಮಾಲೆ ಮಣಿಯ
ಜಪಿಸುತ್ತಲೇ ಇರುತಿರುವ
ಆದರೂ ಅವ ಕವಿತೆಯಾಗಲಾರ

ನಿಸ್ವಾರ್ಥದ ಮನದಲ್ಲಿ
ಸಖಿಸುಖವ ಬಯಸುತಲಿರುವ
ನೆರಳನ್ನು ನಾಚಿಸುತ
ಜೊತೆಯಲ್ಲಿ ಇರುತಿರುವ
ಆದರೂ ಕವಿತೆಯಾಗಲಾರ

ಅಕ್ಷರಗಳ ಜೋಡಿಸಿ ಪೊಣಿಸಿ
ಪದಮಾಲೆ ಮಾಡುತಲಿರುವ
ನನ್ನಗದನು ಸಿಂಗರಿಸಿ
ನನ್ನನ್ನೇ ಕವಿತೆಯಾಗಿಸಿರುವ
ಆದರೂ ಅವನೆಂದೂ ಕವಿತೆಯಾಗಲಾರ

ನರ ನರವು ನುಡಿದು ಮಿಡಿದು
ಸುಸ್ವರವ ಹೊರಡಿಸುತಲಿರುವ
ನನ್ನೆಲ್ಲ ಕಷ್ಟಕ್ಕೆ ಒಲಿದು
ಜೀವ ರಸ ಸುರಿಸುತಲಿರುವ
ಆದರೂ ಕವಿತೆ ಆಗಲಾರ

ತಾ ಬೆಳಸಿದ ಕೈ ತೋಟದಿ
ಹೂವಾಗಿ ಅರಳಿಸುತಿರುವ
ಬೃಂಗವೇ ತಾನಾಗಿ ಸುಳಿದು
ಮಧುಚಂದ್ರನ ಅರಸುತಲಿರುವ
ಆದರೂ ಕವಿತೆಯಾಗಲಾರ

ಹಾರುವ ಹಕ್ಕಿಯ ತಡೆದು
ಹಾಡುವದ ಕಲಿಸುತಲಿರುವ
ಹೊಸ ರಾಗಕೆ ಸ್ವರಾಕ್ಷರವ
ನನಗೆಂದೆ ರಚಿಸುತಲಿರುವ
ಆದರೂ ಕವಿತೆಯಾಗಲಾರ

ಗಿಡ ಗಿಡಕು ಮಾತರಳಿಸಿ
ಎಸಳೆಸಳಿಗೂ ಮುತ್ತ ನೀಡುತಲಿರುವ
ಅಕ್ಕರೆಯಲಿ ತಲೆ ಸವರಿ
ಮುಡಿಯಲ್ಲಿ ಸಿಂಗರಿಸುತಲಿರುವ
ಆದರೂ ಕವಿತೆಯಾಗಲಾರ

ಉಸಿರುಸಿರಲಿ ನನ್ನೆಸರನೆ
ಹಸಿರಾಗಿ ಉಸುರುತಲಿರುವ
ಬಾರದಿರುವ ಏಕಾಂತವನು
ದಿನವಿಡೀ ಹಂಬಲಿಸುತಲಿರುವ
ಆದರೂ ಕವಿತೆಯಾಗಲಾರ

ಶರಾವತಿಯ ಧಭೆಯಂತೆ ಭೋರ್ಗರೆದು
ಒಲವ ಜಲವ ಸುರಿಸುತಲಿರುವ
ಜಗದ ಕೊನೆಯವರೆಗೂ ಕಾಯುತ
ಮನದೆ ನಸು ನಗುತಲಿರುವ
ಆದರೂ ಕವಿತೆಯಾಗಲಾರ

ಅಂಬರದ ಆಚೆಗೆ ನನ್ನಿರಿಸಿ
ತಲೆಯೆತ್ತಿ ನೋಡುತಲಿರುವ
ತ್ರಿಲೋಕದಲಿ ಎಲ್ಲಿಯೂ ನಮ್ಮಂತೆ
ಒಡೆಯ ಒಡತಿಯರಿಲ್ಲ ಎನ್ನುತಲಿರುವ
ಆದರೂ ಅವ ಎಂದೂ
ನನ್ನಂತೆ ಕವಿತೆಯಾಗಲಾರ


-ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಇಳಕಲ್