ಅನುದಿನ ಕವನ-೧೪೬೭, ಕವಿ: ರವೀ ಜಿ ಹಂಪಿ,  ಕವನದ ಶೀರ್ಷಿಕೆ: ಇಂತಿ ನಿನ್ನ ಗುಲಾಮ

ಇಂತಿ ನಿನ್ನ ಗುಲಾಮ

ಪ್ರೀತಿಸಿದ ಹೊಸತರಲ್ಲಿ
ನಾನು ಪ್ರತಿ ಪತ್ರವನ್ನೂ
“ಇಂತಿ ನಿನ್ನ ಗುಲಾಮ”
ಎಂಬ ಒಕ್ಕಣಿಕೆಯಿಂದಲೇ
ಮುಗಿಸುತ್ತಿದ್ದರಿಂದಲೋ ಏನೋ.

ನಿನ್ನ ಕಣ್ಣುಗಳಿಗೆ
ನನ್ನ ಪ್ರೀತಿ ಚಷ್ಮಾ ತೊಡಿಸಿ
ಹಗಲಿರುಳೂ ನಿನ್ನ ಜಗತ್ತನ್ನು
ಗುಲಾಬಿಯಾಗಿರಿಸಿದ್ದ-
ಕಾರಣದಿಂದಲೋ ಏನೋ

ಸಮಯ ಕಳೆದಂತೆ
ಗುಲಾಮಗಿರಿ ಮತ್ತು
ಮೈಮರೆಸುವ ಬಣ್ಣಗಳು
ಪ್ರೇಮವಲ್ಲದ ಸಂಗತಿ
ನಿನಗೆ ತಿಳಿಯದೇ ಹೋಗಿತ್ತು

ಬಣ್ಣದ ಚಷ್ಮಾ ಕಳಚಲು
ಒಪ್ಪದ ನಿನಗೆ
ನಾನು ಯಾವತ್ತೂ
ಗುಲಾಮನಂತೆಯೇ
ಕಾಣತೊಡಗಿದ್ದೆನೇನೋ

ಸ್ವಂತ ಕೂಸಾದರೂ
ತಾಸೊತ್ತು ಕಳೆದ ಮೇಲೆ
ಇಳಿಸಲೇ ಬೇಕೆನಿಸುತ್ತದೆ
ನಶೆ ಇಳಿದ ಮೇಲೆ
ಹೊಟ್ಟೆ ಚುರುಗುಟ್ಟುತ್ತದೆ

ಗುಲಾಮರನ್ನು
ಪ್ರೀತಿ ಮಾತ್ರ ಬದುಕಿಸುತ್ತದೆ
ಮತ್ತು ಉಳಿದವರಿಗೆ
ಅನ್ನಿಸುವುದೇನೆಂದರೆ
ನೀರು ಮತ್ತು ಮೂರೊತ್ತು ಅನ್ನ


-ರವೀ ಜಿ ಹಂಪಿ
—–