ಬಳ್ಳಾರಿ, ಜ.7: ನಾವೆಲ್ಲಾ ಭಾರತೀಯರು ಎಂಬ ಮಂತ್ರ ಸಹಬಾಳ್ವೆ, ಭಾವೈಕ್ಯ ಮೂಡಿಸುತ್ತದೆ ಎಂದು ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ತಿಳಿಸಿದರು.
ನಗರದ ಭೀಮರಾವ್ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ ನಲ್ಲಿ ಸೋಮವಾರ ಸಂಜೆ ಬೆಂಗಳೂರಿನ ಮನಂ ಅಭಿಮಾನಿ ಬಳಗ ಪ್ರಕಟಿಸಿರುವ ‘ನಾವೆಲ್ಲಾ ಭಾರತೀಯರು’ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಹಿತಿ, ಸಂಶೋಧಕ, ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ) ಅವರ ನಾವೆಲ್ಲಾ ಭಾರತೀಯರು ಘೋಷ ವಾಕ್ಯ ದೇಶಭಕ್ತಿ, ದೇಶಪ್ರೇಮವನ್ನು ಉದ್ದೀಪನಗೊಳಿಸುತ್ತದೆ ಎಂದು ಹೇಳಿದರು.
ಕ್ಯಾಲೆಂಡರ್ ಬಿಡುಗಡೆಗೊಳಿಸಿದ ನಿವೃತ್ತ ಸಬ್ ಇನ್ಸ್ಪೆಕ್ಟರ್ ವಿ. ಶಂಕರಪ್ಪ ಅವರು ಮಾತನಾಡಿ, ಬಳ್ಳಾರಿ ವಲಯದ ಐಜಿಪಿಗಳಾಗಿದ್ದ ಸಂದರ್ಭದಲ್ಲಿ ಎಂ. ನಂಜುಂಡಸ್ವಾಮಿ(ಮನಂ) ಅವರು ಕಿರಿಯ ಅಧಿಕಾರಿಗಳಿಗೆ ನೀಡುತ್ತಿದ್ದ ಸಹಕಾರ, ಬೆಂಬಲ ಅತ್ಯುತ್ತಮವಾಗಿತ್ತು. ಅವರ ಮಾರ್ಗದರ್ಶನ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಗೂಳಪ್ಪ ಬೆಳ್ಳಿಕಟ್ಟೆ ಮಾತನಾಡಿ, ಎಡಿಜಿಪಿ ಎಂ.ನಂಜುಂಡಸ್ವಾಮಿ ಅವರು ಮಳವಳ್ಳಿ, ಮುಂಡರಗಿ, ಶಿರಹಟ್ಟಿ ಅಂತಹ ಗ್ರಾಮಗಳಲ್ಲಿ ಅರಳಿದ ಮಾದರಿ ಗ್ರಾಮೀಣ ಪ್ರತಿಭೆ. ತಮ್ಮ ಜವಾಬ್ದಾರಿಯುತ ಪೊಲೀಸ್ ಕರ್ತವ್ಯದ ನಡುವೆಯೂ ಸಾಹಿತ್ಯ, ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ನಾಡಿನ ಅಪರೂಪದ ಹಿರಿಯ ಅಧಿಕಾರಿ ಎಂದು ಕೊಂಡಾಡಿದರು.
ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಉಪಾಧ್ಯಕ್ಷ ಲಕ್ಷ್ಮೀನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಸಿ.ಹನುಮಪ್ಪ, ಸದಸ್ಯ ವಿಲಾಸ್ ಮಾನಕರ್, ಭೀಮರಾವ್ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ ನ ಮುಖ್ಯಸ್ಥ ಶೇಖರ್ ಕುರುವಳ್ಳಿ, ಯುವ ಛಾಯಾಗ್ರಹಕ ರಾಮ್ ಕಾಮ್ಳೇಕರ್, ಸ್ಟಡಿ ಸರ್ಕಲ್ ನ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮನಂ ಅವರ ‘ನಾವೆಲ್ಲಾ ಭಾರತೀಯರು’ ಘೋಷವಾಕ್ಯವನ್ನು ಅತಿಥಿಗಳೊಂದಿಗೆ ಸಭಿಕರು ಪಠಿಸಿದರು.
ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಸಂಶೋಧಕ ಡಾ. ಮುಜಫರ್ ಅಸಾದಿ, ಸಾಹಿತಿ ಡಾ. ನಾ.ಡಿಸೋಜ ಮತ್ತು ಕನ್ನಡಪರ ಹೋರಾಟಗಾರ ಕೋಳೂರು ಸಿ. ಶ್ರೀನಿವಾಸ್ ಅವರಿಗೆ ಸಭೆ ಸಂತಾಪ ಸೂಚಿಸಿತು.
—–