ಬೀದಿಯ ಗೋಡೆಗೊರಗಿದ
ಅವಳು
ಅದೆಷ್ಟು ಭಾವಗಳನ್ನು
ಬಿತ್ತುತಾಳೆ
ಹದವರಿತ ಇವನೆದೆಯಲ್ಲಿ
ಆತ್ಮೀಯತೆಯ
ಮೊಳಕೆ ತೋರಲು
ಬಹು ಸಮಯ ತೆಗೆದುಕೊಂಡಿಲ್ಲ
ನೆನಪುಗಳು
ಬದಲಾಗುತ್ತವೆ
ಕನಸುಗಳು ಹರಿದಾಡುತ್ತವೆ
ಅವಳಿಷ್ಟದ ಬಣ್ಣ
ಇವನಿಷ್ಟದ ಹೂವು
ಕೊನೆಗೆ ಆಗಸದ ತಾರೆಗಳೂ
ಸಾಗರನ
ಅಲೆಗಳಲ್ಲಿ
ಪಾದ ತೋಯಿಸಿಕೊಳ್ಳುವ
ಮಾತು ಪಕ್ಕ ಆಗುತ್ತದೆ
ಸಮಯಕ್ಕೆ ಕಡಿವಾಣ
ಕೇಳುವುದು ಪ್ರೇಮಿಗಳಷ್ಟೇ
ಆದರೆ ಸೂರ್ಯ ತನ್ನ ಕೆಲಸ
ಮುಗಿಸುತ್ತಾನೆ
ಹೀಗೊಂದು
ಭಾವ ನಿರಂತರವಾಗಿರಲಿ
ಎದೆಯ ಎಂತದೋ
ಸಮಾಧಾನಕ್ಕೆ
ಎಂದು ಉಸರಿಸುತ್ತಾನೆ
ಅವಳು ನಕ್ಕು
ಏನು ತಿಳಿಯದವಳಂತೆ
ಮಾತು ಬದಲಾಯಿಸಿ
ಕಾಡಿಗೆ ಹಚ್ಚಿದ ಕಂಗಳಿಂದ
ವಿದಾಯ ಸೂಚಿಸುತ್ತಾಳೆ
-ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
—–