ಜಾಗೃತ ಅಪ್ಪ…
ಅಪ್ಪ
ನೋವುಂಡ ಒಬ್ಬ ಸಂತ
ಮುಖದ ಬರೆಯಂತ ಗೆರೆಗಳೆ
ಅವನ ಕಷ್ಟದ ಕುರಿತು ಹೇಳುತ್ತವೆ…
ಅವನು ಬೆವರ ಬಸಿದಷ್ಟು
ಇನ್ನಾರು ಕೂಡ ಬೆವರ ಬಸಿದಿಲ್ಲ
ಮನೆಯಲ್ಲಿ ಅಕ್ಕಿ ಬೇಯುತ್ತಿತ್ತು ಅಂದರೆ
ಅವನ ಬೆವರ ಹನಿಗಳೆ ಅನ್ನವಾಗಿ
ಕುದಿಯುತಿದೆ ಎಂದರ್ಥ…
ಅವನು ಸದಾ ಹರಿಯುವ ನದಿಯಂತೆ
ಚಲನಶೀಲವಾಗಿ ಗೇಯ್ಮೆಯಲ್ಲಿ
ತಲ್ಲಿನನಾಗಿದ್ದ ಒಬ್ಬ ಸ್ವಚ್ಚಂದ ರೈತ
ಭೂಮಿ ಒಪ್ಪುವಷ್ಟು
ಬಾನು ಮೆಚ್ಚುವಷ್ಟು
ಯಾರಿಗೂ ಹೊರೆಯಾಗದ
ಯಾರಿಗೂ ಕೇಡು ಬಯಸದ
ಸಿಟ್ಟುಸಿಡುಕಿಲ್ಲದ ಶುದ್ದ ಅಪರಂಜಿ…
ತನ್ನ ಪಾಡೆಲ್ಲವ ಹಾಡಾಗಿಸಿ
ಬಿಸಿಲು ಮಳೆ
ಚಳಿ ಶೀತ ಗಾಳಿಗಳ ಲೆಕ್ಕಿಸದೆ
ದುಡಿದು ದಣಿವಾರಿಸಿಕೊಳ್ಳುವ ಮೊದಲೆ
ಮತ್ತೆ ಕೂಲಿಗೆ ಅಣಿಯಾಗುತ್ತಿದ್ದ
ಪಕ್ಕ ಲೆಕ್ಕಾಚಾರದ ಮನುಷ್ಯ…
ತಾನಾಯಿತು ತನ್ನ ಪಾಡಾಯಿತು
ಹೀಗೆ ಬದುಕಿ
ಕಟುಕರಿಗೂ ಒಳಿತನ್ನೆ ಬಯಸಿದ
ಸೀದಾಸಾದಾ ಬಡಕಲು ಪಾಯಿ
ಸದಾ ಕಾಲ ನನ್ನೊಳಗೆ
ಎಚ್ಚರವಾಗಿರುವ ಜಾಗೃತ ಅಪ್ಪ….
-ಸಿದ್ದು ಜನ್ನೂರ್, ಚಾಮರಾಜನಗರ
—–