ಆಡು ಮುಟ್ಟದ ಸೊಪ್ಪಿಲ್ಲ -ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು

ಆಡು ಮುಟ್ಟದ ಸೊಪ್ಪಿಲ್ಲ

ಆಡಿನ ಮತ್ತೊಂದು ಹೆಸರು ಮೇಕೆ. ನಮ್ಮ ಮನೆಯಲ್ಲಿ ಸದಾ ಎರಡು ಮೇಕೆಗಳಿರುತ್ತಿದ್ದವು. ನಮ್ಮೂರಿನಲ್ಲಿ ಮೇಕೆಗಳ ಒಂದು ಹಿಂಡು ಇತ್ತು. ಆ ಹಿಂಡಿನಲ್ಲಿ ಸುಮಾರು ಅರವತ್ತರಿಂದ ಎಪ್ಪತ್ತು ಮೇಕೆಗಳಿರುತ್ತಿದ್ದವು. ಆ ಹಿಂಡು ಊರಿನ ಸಾಹುಕಾರರೊಬ್ಬರಿಗೆ ಸೇರಿದ್ದಾಗಿತ್ತು. ಅವರಿಂದ ಒಂದು ಮೇಕೆಯನ್ನು ಪಾಲಿಗೆ ಪಡೆದು ನಮ್ಮ ತಂದೆತಾಯಿಯವರು ‘ಹಟ್ಟಿ ಪದ್ದತಿಯಲ್ಲಿ ಮೇಕೆ ಸಾಕಾಣಿಕೆ’ಯಲ್ಲಿ ತೊಡಿಗಿಕೊಂಡಿದ್ದರು. ಹಟ್ಟಿಯಲ್ಲಿ ಸದಾ ಕಟ್ಟಿಹಾಕಿ ಸಾಕುತ್ತಿದ್ದರು. ಮೇಕೆ ಒಂದು ಸಾರಿ ಮರಿ ಹಾಕಿದರೆ ಆ ಮರಿ ನಮಗೆ, ಮುಂದಿನ ಸಾರಿ ಮರಿ ಹಾಕಿದರೆ ಅದು ಸಾಹುಕಾರರಿಗೆ ಎಂಬ ‘ಪಾಲಿಗೆ ಸಾಕುವ ಪದ್ದತಿ’ ನಡೆದುಕೊಂಡು ಬರುತ್ತಿತ್ತು. ಪಾಲು ಹಂಚಿಕೆ ನ್ಯಾಯಯುತವಾಗಿ ನಡೆಯುತ್ತಿತ್ತು.

ಕಷ್ಟಕಾಲದಲ್ಲಿ ಒಂದು ಮೇಕೆ ಮಾರಿಕೊಂಡರೆ ಸಹಾಯಕ್ಕೆ ಆಗುತ್ತದೆ ಎಂಬ ಉದ್ದೇಶದಿಂದ ನಮ್ಮ ಮನೆಯಲ್ಲಿ ಮೇಕೆ ಸಾಕಲಾಗುತ್ತಿತ್ತು. ಮನೆ ಚಿಕ್ಕದು. ಹೆಚ್ಚೆಂದರೆ, ಹತ್ತು ಅಡಿ ಅಗಲ ಇಪ್ಪತ್ತೈದು ಅಡಿ ಉದ್ದ ಇದ್ದಿರಬಹುದು. ಒಟ್ಟು ಇನ್ನೂರೈವತ್ತು ಚದರಡಿಯ ಮನೆ. ಮನೆಯ ಉದ್ದ ಎಂದರೆ ಪೂರ್ವದಿಂದ ಪಶ್ಚಿಮಕ್ಕೆ. ಚಿಕ್ಕ ಮನೆಯಲ್ಲಿಯೇ, ಪೂರ್ವಭಾಗದಲ್ಲಿ ಅಡ್ಡಗೋಡೆಯಿರುವ ಅಡಿಗೆ ಮಾಡುವ ಒಂದು ಪುಟ್ಟ ಕೋಣೆ. ನಡುಮನೆಯಲ್ಲಿ ನಾವೆಲ್ಲಾ ವಾಸಿಸುವ ಜಾಗ. ಮನೆಯ ಪಶ್ಚಿಮ ಭಾಗದಲ್ಲಿ ಜಾನುವಾರುಗಳನ್ನು ಕಟ್ಟಿಹಾಕಲು ಬಳಸುತ್ತಿದ್ದ ದನದ ಕೊಟ್ಟಿಗೆಯ ಜಾಗ. ಆ ಕೊಟ್ಟಿಗೆ ಜಾಗ ಹತ್ತು ಅಡಿ ಅಗಲ ಎಂಟು ಅಡಿ ಉದ್ದ ಇದ್ದಿರಬಹುದು. ನಮ್ಮ ತಂದೆಯವರು ಚೋಮನಂತೆ ಬೇಸಾಯದ ಕೆಲಸಕ್ಕೆ ಸಾಕಿಕೊಂಡಿದ್ದ ಎರಡು ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಅವುಗಳ ಹಿಂದೆ ಉಳಿದ ಕಿಂಚಿತ್ತು ಜಾಗದಲ್ಲಿ ಎರಡು ಮೇಕೆಗಳನ್ನು ಕಟ್ಟಿಹಾಕುತ್ತಿದ್ದೆವು.

ನಾಲ್ಕನೇ ತರಗತಿ ಅಭ್ಯಾಸ ಮಾಡುವ ಕಾಲದಿಂದ ಹಿಡಿದು ಹಳ್ಳಿಯಲ್ಲಿ ಏಳನೇ ತರಗತಿ ಓದುವವರೆಗೆ ನಾನು ದಿನನಿತ್ಯ ನಮ್ಮ ಮನೆಯ ಎರಡು ಮೇಕೆಗಳಿಗೆ ಮೇವು ತರಬೇಕಿತ್ತು. ಮೇಕೆಗಳಿಗೆ ಸರ್ವೆಮರದ ರೆಂಬೆಕೊಂಬೆ ಕಟಾವು ಮಾಡಿ ತಂದು ಹಟ್ಟಿಯಲ್ಲಿ ಕಟ್ಟಿದ್ದ ಮೇಕೆಗಳ ಪಕ್ಕ ನೆಟ್ಟಿದ್ದ ಮರದಕಂಬಕ್ಕೆ ರೆಂಬೆಗಳನ್ನು ತಲೆಕೆಳಗು ಮಾಡಿ ಕಟ್ಟಿ ಶಾಲೆಗೆ ತೆರಳಬೇಕಿತ್ತು.

ಕೆರೆಯ ಹಾದಿಯಲ್ಲಿ ಹೊರಟು ಕೆರೆ ಏರಿ ಮೇಲೆ ನಡೆದು ದಿನ್ನೆ ಬಯಲಿನ ಕಡೆ ಸಾಗಿದರೆ ಅಲ್ಲಿ ಏಳೆಂಟು ಸರ್ವೆಮರದ ತೋಪುಗಳಿದ್ದವು. ಅವು ನಮ್ಮೂರಿನವರ ಸರ್ವೆತೋಪುಗಳಾಗಿದ್ದವು. ಯಾವುದಾದರೂ ಒಂದು ತೋಪಿನಿಂದ ಒಂದು ಹೊರೆಯಷ್ಟು, ಎರಡು ಮೇಕೆಗಳಿಗೆ ಒಂದು ದಿನಕ್ಕೆ ಸಾಕಾಗುವಷ್ಟು ಸರ್ವೆಸೊಪ್ಪನ್ನು ಕತ್ತರಿಸಿ ತರುತ್ತಿದ್ದೆನು.

ಮೇಕೆ ಸಾಕಾಣಿಕೆಯು ನಮ್ಮ ಮನೆಯಲ್ಲಿ ರೂಢಿಗತವಾಗಿ ಹಲವು ದಶಕಗಳೇ ನಡೆದು ಬಂದಿದೆ. ಹೈಸ್ಕೂಲು ಶಿಕ್ಷಣವನ್ನು ಕೋಲಾರದಲ್ಲಿ ಓದುತ್ತಿದ್ದೆ. ಬೇಸಿಗೆ ರಜೆ ಮತ್ತು ದಸರಾ ರಜೆಗೆ ನಮ್ಮೂರಿಗೆ ಬಂದಾಗ ಮೇಕೆಗಳಿಗೆ ಮತ್ತದೇ ಸರ್ವೆಸೊಪ್ಪು ತರುವ ಕೆಲಸ ನನ್ನದಾಗುತ್ತಿತ್ತು. ಮೇಕೆಗಳು ಸರ್ವೆಸೊಪ್ಪಿನ ಸೂಜಿಯಾಕಾರದ ಎಲೆಗಳನ್ನು ತಿಂದು ಮುಗಿಸಿದ ಮೇಲೆ ಉಳಿಯುತ್ತಿದ್ದ ಬೋಳು ಬೋಳಾದ ರೆಂಬೆಗಳನ್ನು ತೆಗೆದು ಹಿತ್ತಲಲ್ಲಿ ಕೂಡಿ ಹಾಕುತ್ತಿದ್ದೆವು. ಅವು ಒಣಗಿದ ಮೇಲೆ ಒಲೆಗೆ ಉರುವಲಾಗುತ್ತಿತ್ತು. ಆಗೆಲ್ಲಾ ಅಡುಗೆ ಮಾಡುತ್ತಿದ್ದುದು ಊರವರ ಎಲ್ಲರ ಮನೆಗಳಲ್ಲೂ ಸೌದೆಯಲ್ಲಿಯೇ. ನಮ್ಮ ಮನೆಗೆ ನಿತ್ಯ ಒಂದು ಹೊರೆ ಸರ್ವೆ ಮರದ ರೆಂಬೆಗಳು ಮೇಕೆಗಳ ಮೇವಾಗಿ ಬಂದು ಬೀಳುತ್ತಿದ್ದುದರಿಂದ ಒಲೆಗೆ ಬೇಕಾದ ವರ್ಷದ ಸೌದೆ ಅದರಿಂದಲೇ ಸಿಕ್ಕಿಬಿಡುತ್ತಿತ್ತು. ಇದೆಲ್ಲಾ ಕಳೆದ ಶತಮಾನದ ಎಂಬತ್ತರ ದಶಕದ ಮಾತಾಯಿತು.

ಸರ್ವೆಸೊಪ್ಪನ್ನು ಕತ್ತರಿಸಿ ತರಲು ಒಂದು ಚೂಪಾದ ಮಚ್ಚನ್ನು ಇಟ್ಟುಕೊಂಡಿದ್ದೆವು. ಮಚ್ಚುಗಳಲ್ಲಿ ಎರಡು ವಿಧ. ಒಂದು ದೊಡ್ಡ ಮಚ್ಚು. ಮತ್ತೊಂದು ಚಿಕ್ಕ ಮಚ್ಚು. ಚಿಕ್ಕ ಮಚ್ಚನ್ನು ಕೊಯ್ಲು ಮಚ್ಚು ಎಂತಲೇ ಕರೆಯುತ್ತಿದ್ದೆವು. ಅದು ಕುಡುಗೋಲಿನಷ್ಟು ಗಾತ್ರದಲ್ಲಿರುತ್ತಿತ್ತು. ಕೊಯ್ಲು ಮಚ್ಚು ಹಿಡಿದು ಸರ್ವೆಮರ ಏರಿ ರೆಂಬೆಗಳನ್ನು ಕತ್ತರಿಸಿ ತರುತ್ತಿದ್ದೆವು.

ಸರ್ವೆಮರ ಸಾಮಾನ್ಯವಾಗಿ ನೇರವಾಗಿ ಬೆಳೆಯುತ್ತದೆ. ಒಂದು ಸಾರಿ ಹೀಗಾಯ್ತು. ಮರವನೇರಿ ರೆಂಬೆಯನ್ನು ಕತ್ತರಿಸುತ್ತಿದ್ದೆ. ಮೇಲಿನ ಒಂದು ರೆಂಬೆಯ ಕಡೆ ಕಣ್ಣು ಹಾಯಿಸಿದರೆ ರೆಂಬೆಯ ಮೇಲೆ ಮಲಗಿದ್ದ ಹಾವು ನನ್ನನ್ನೇ ನೋಡುತ್ತಿತ್ತು. ಹಳ್ಳಿಭಾಷೆಯಲ್ಲಿ ಬಿಲ್ಲೂರ ಹಾವು ಎಂದು ಕರೆಯುತ್ತಾರೆ. ಅದು ತೆಳ್ಳಗೆ ಒಂದು ಬಾರಿನಷ್ಟು ಉದ್ದವಿರುತ್ತದೆ. ಮರದಿಂದ ಮರಕ್ಕೆ ಹಾರುತ್ತದಂತೆ. ಮರದಿಂದ ಹಾರಿ ಮನುಷ್ಯನ ಹಣೆಗೆ ಕಚ್ಚುತ್ತದಂತೆ. ಕಚ್ಚಿಸಿಕೊಂಡ ಮನುಷ್ಯ ಕೆಲವೇ ನಿಮಿಷಗಳಲ್ಲಿ ಸಾಯುತ್ತಾನಂತೆ. ಸತ್ತವನನ್ನು ಊರಿಗೆ ಕರೆತರುವುದನ್ನು ನೋಡಲು ಊರಬಾಗಿಲ ಮೇಲೆ ಬಂದು ಕಾದುಕುಳಿತು ನೋಡುವುದಂತೆ. ಮಸಣಕ್ಕೂ ಬಂದು ಕಾಯುವುದಂತೆ.

ಹಿರಿಯರು ಹೇಳುತ್ತಿದ್ದ ಕತೆ ನೆನಪಾಗಿ ಮೇಲಿನ ರೆಂಬೆಯಲ್ಲಿದ್ದ ಆ ಬಿಲ್ಲೂರ ಹಾವು ನೋಡಿದ ಕ್ಷಣ ಎಡಗೈಯಲ್ಲಿ ಹಿಡಿದಿದ್ದ ಮರದ ಹಿಡಿತ ಬಿಟ್ಟುಬಿಟ್ಟೆ. ಗಾಬರಿಯಿಂದ ಮರದಿಂದ ಜಾರಿಬಿದ್ದೆ. ಜಾರಿದ ರಭಸಕ್ಕೆ ಮರದ ಕತ್ತರಿಸಿದ ಒಂದು ರೆಂಬೆಯ ಚೂಪಾದ ಸಿಬುರು ತಗಲಿಕೊಂಡು ಹೊಟ್ಟೆಯ ಮೇಲೆ ತರಚುಗಾಯವಾಗಿತ್ತು. ಎದ್ದೆನೋ ಬಿದ್ದೆನೋ ಎಂದು ಆ ತೋಪಿನಿಂದ ಬಹುದೂರ ಓಡಿಬಂದುಬಿಟ್ಟೆ. ಒಂಡೆರೆಡು ಸಾರಿ ಹಿಂತಿರುಗಿ ನೋಡಿದೆ. ಹಾವು ಅಟ್ಟಿಸಿಕೊಂಡು ಬರುತ್ತಿರಲಿಲ್ಲ. ಬಿಲ್ಲೂರ ಹಾವು ಶರವೇಗದಲ್ಲಿ ಅಟ್ಟಿಸಿಕೊಂಡು ಬರುತ್ತದೆಂದು ಹಿರಿಯರು ಹೇಳುತ್ತಿದ್ದ ಮಾತೂ ಆ ಕ್ಷಣದಲ್ಲಿ ನೆನಪಾಯಿತು. ಅಂತೂ ಇಂತೂ ಬಹುದೂರ ಓಡಿಬಂದ ಮೇಲೆ ಧೈರ್ಯ ಬಂತು.

ಅಂದು ಮತ್ತೊಂದು ತೋಪಿನಲ್ಲಿ ಸರ್ವೆಮರವನ್ನೇರಿ ಮೇಕೆಗಳಿಗೆ ಸೊಪ್ಪು ಕತ್ತರಿಸಿ ತರುವ ಧೈರ್ಯವಿರಲಿಲ್ಲ. ಮನಸ್ಸಿನಲ್ಲಿ ಹಾವಿನ ಭಯವೇ ಓಲಾಡುತ್ತಿತ್ತು. ಇತ್ತ ಬರಿಗೈಯಲ್ಲಿ ಮನೆಗೆ ಬಂದರೆ ಮೇಕೆಗಳಿಗೆ ಅಂದು ಉಪವಾಸವಾಗುತ್ತಿತ್ತು. ಮನೆಯವರು ಮೇವು ತರದೇ ಬಂದಿದ್ದಕ್ಕೆ ನನ್ನನ್ನು ದಂಡಿಸುತ್ತಿದ್ದರು. ಬರುವ ದಾರಿಯಲ್ಲಿ ಕೆರೆಯ ಹಿಂಬಯಲಿನಲ್ಲಿ ಬೆಳೆದಿದ್ದ ಕಳೆಯ ರೂಪದ ಜಿಡ್ಡುಗಿಡಗಳನ್ನು ಒಂದು ಹೊರೆಯಷ್ಟು, ಎರಡು ಮೇಕೆಗಳಿಗಾಗುವಷ್ಟು ಕತ್ತರಿಸಿ ತಂದೆ. ಆ ದಿನದ ಮೇವು ಡ್ಯೂಟಿ ಅಲ್ಲಿಗೆ ಬರಕಾಸ್ತಾಯಿತು.

ಮರದ ಮೇಲೆ ಹಾವು ನೋಡಿ ಜಾರಿ ಬಿದ್ದಾಗ ಹೊಟ್ಟೆಯ ಮೇಲಾದ ಗಾಯವನ್ನು ಗಾಯದ ಗುರುತನ್ನು ಬಹುಕಾಲ ನನ್ನ ಸಹಪಾಠಿಗಳಿಗೆ ಅಂಗಿ ಎತ್ತಿ ತೋರಿಸುತ್ತಿದ್ದೆ. ಯಾವುದೋ ಯುದ್ದ ಗೆದ್ದು ಬಂದಂತೆ ಬೀಗುತ್ತಿದ್ದೆ. ಘಟನೆ ಜರುಗಿದಾಗ ನಾನು ಆರನೇ ತರಗತಿಯಲ್ಲಿ ಓದುತ್ತಿದ್ದೆ. ಆದರೆ, ಎಷ್ಟೋ ವರ್ಷಗಳ ನಂತರ ಬಿಲ್ಲೂರ ಹಾವು ವಿಷಕಾರಿಯಲ್ಲ ಎಂಬುದು ತಿಳಿದುಬಂತು.

ಆಡು ಸಾಕಾಣಿಕೆಯ ಅನುಭವಗಳು ದಂಡಿಯಾಗಿವೆ. ನಾನು ಹೈಸ್ಕೂಲು ಶಿಕ್ಷಣಕ್ಕೆ ಕೋಲಾರಕ್ಕೆ ಸೇರಿಕೊಂಡೆ. ಅಲ್ಲಿ ಹಾಸ್ಟೆಲ್ಲಿನಲ್ಲಿ ವಾಸ. ಇತ್ತ ಹಳ್ಳಿಯಲ್ಲಿ ಆಡುಗಳಿಗೆ ದಿನಾಲು ಮೇವು ತಂದು ಹಾಕುವವರು ಇರಲಿಲ್ಲ. ನಮ್ಮ ತಾಯಿಯವರೇ ಒಂದಿಷ್ಟು ಅದೂ ಇದೂ ಹೊಲದ ಬೆಳೆಯುಳಿಕೆಗಳನ್ನು ಅಥವಾ ಹೊಲದ ಕಳೆಗಿಡಗಳನ್ನು, ಸೊಪ್ಪುಸೊದೆಗಳನ್ನು, ಹುಲ್ಲನ್ನು ಕಿತ್ತು ತಂದು ಹಾಕಬೇಕಿತ್ತು. ಒಂದು ದಿನ ಮೇಕೆಗಳಿಗೆ ಮೇವು ಕಡಿಮೆಯಾಗಿರಬೇಕು. ಅವುಗಳಿಗೆ ಹಸಿವಾಗಿರಬೇಕು. ಆ ಕಾರಣದಿಂದ ಮಧ್ಯರಾತ್ರಿಯಲ್ಲಿ ಮನೆಯೊಳಗಿನ ಗೊಂತಿನಿಂದ ಕಿತ್ತುಕೊಂಡು ಬಂದ ಮೇಕೆಯೊಂದು ಕತ್ತಲ ಮನೆಯಲ್ಲಿ ನಮ್ಮ ತಾಯಿಯವರ ಬೆರಳನ್ನು ಕಚ್ಚಿಬಿಟ್ಟಿದೆ, ರಕ್ತಬರುವಷ್ಟು. ಆಗ ಬೆಂಕಿಕಡ್ಡಿ ಗೀರಿ ಸೀಮೆ ಎಣ್ಣೆಯ ಬುಡ್ಡಿದೀಪ ಹಚ್ಚಿ ಮೇಕೆಯನ್ನು ಗೊಂತಿಗೆ ಕಟ್ಟಿಹಾಕಿದರಂತೆ.

ಬೆಳಗಾಗುತ್ತಿದ್ದಂತೆ ಮನೆಯಲ್ಲಿನ ಮೇಕೆಗಳನ್ನು ಹಟ್ಟಿಯಲ್ಲಿ ಕಟ್ಟಿ ಹಾಕಬೇಕಿತ್ತು. ಮನೆಯ ಗೊಂತಿನಿಂದ ಹಗ್ಗ ಬಿಚ್ಚುತ್ತಿದ್ದಂತೆ ಅವು ದರದರನೇ ಹಟ್ಟಿಗೆ ಓಡುತ್ತಿದ್ದವು. ಹಗ್ಗ ಹಿಡಿದುಕೊಂಡಿರುತ್ತಿದ್ದ ನಮ್ಮನ್ನು ಎಳೆದುಕೊಂಡು ಹೋಗುತ್ತಿದ್ದವು. ಅವುಗಳಿಗೆ ಕಟ್ಟಿದ್ದ ತೆಂಗಿನ ನಾರಿನ ಹಗ್ಗವು ನಮ್ಮ ಅಂಗೈಯನ್ನು ತರಚಿಬಿಡುವಷ್ಟು ರಭಸವಾಗಿ ಅವು ಎಳೆಯುತ್ತಿದ್ದವು. ಹಿಡಿದ ಹಗ್ಗವನ್ನು ಬಿಟ್ಟುಬಿಡುತ್ತಿದ್ದೆವು. ಮಳೆಗಾಲದಲ್ಲಿ ಹಟ್ಟಿಯಲ್ಲಿ ಆಯತಪ್ಪಿ ಬಿದ್ದು ತೊಟ್ಟಬಟ್ಟೆಗಳಿಗೆ ಒದ್ದೆಮಣ್ಣಿನ ಸ್ನಾನವಾಗುತ್ತಿತ್ತು. ಜಾಣಮೇಕೆಗಳು ಹಟ್ಟಿ ಬಿಟ್ಟು ಎಲ್ಲಿಗೂ ಓಡಿಹೋಗುತ್ತಿರಲಿಲ್ಲ.

ಸಾಮಾನ್ಯವಾಗಿ ನಾಡಮೇಕೆ ಒಂದೇ ಮರಿಯನ್ನು ಹಾಕುತ್ತದೆ. ನಮ್ಮ ಮನೆಯಲ್ಲಿ ದಷ್ಟಪುಷ್ಟವಾಗಿ ಬೆಳೆದ ಮರಿಹಾಕಿದ ತಾಯಿಮೇಕೆಯ ಕೆಚ್ಚಲು ಹಾಲಿನಿಂದ ಸದಾ ತುಂಬಿ ತುಳುಕುತ್ತಿತ್ತು. ಮರಿಗಾಗಿ ಉಳಿಯುವಷ್ಟು ಹಾಲು ಉತ್ಪಾದನೆಯಾಗುತ್ತಿತ್ತು. ದಿನಾಲು ನಾನು ಒಂದು ಲೋಟದಷ್ಟು ಹಾಲು ಕರೆದುಕೊಂಡು ಕಾಯಿಸಿ ಕುಡಿಯುತ್ತಿದ್ದೆ. ಮಹಾತ್ಮಾ ಗಾಂಧಿಯವರು ಮೇಕೆ ಹಾಲು ಕುಡಿದು ಕಡಲೆಕಾಯಿ ಬೀಜವನ್ನು ತಿನ್ನುತ್ತಿದ್ದುದು ನನಗೆ ನೆನಪಾಗುತ್ತಿತ್ತು. ಮೇಕೆ ಹಾಲಿನ ರುಚಿಗೆ ಒಗ್ಗಿಹೋದೆ. ಕೆಲದಿನ ಅದೊಂದು ಚಟವೇ ಆಗಿಹೋಯಿತು.

ಮಳೆಗಾಲ ಬಂದಾಗ, ಜಡಿಮಳೆಯು ವಾರಗಟ್ಟಲೆ ಹಿಡಿದುಕೊಂಡಾಗ ಒಂದು ಮೈಲಿ ದೂರದ ತೋಪುಗಳಿಗೆ ಹೋಗಿ ಸರ್ವೆಸೊಪ್ಪನ್ನು ತರುತ್ತಿರಲಿಲ್ಲ. ಅಂತಹ ದಿನಗಳಲ್ಲಿ ಹಿತ್ತಲಲ್ಲಿ ನೆಟ್ಟಿದ್ದ ಕೊಂಡಮಾವಿನ ಮರದ ಸೊಪ್ಪನ್ನು ಕಿತ್ತು ಹಾಕುತ್ತಿದ್ದೆವು. ಊರಿನ ಹತ್ತಿರವೇ ಸಿಗುವ ಯಾವುದಾದರೂ ಸೊಪ್ಪು, ಹುಲ್ಲು ಅವುಗಳ ಅನಿವಾರ್ಯ ಮೇವಾಗುತ್ತಿದ್ದವು.

ಆಡುಗಳು ಮುಳ್ಳುಗಿಡಗಳ ಮುಳ್ಳುಗಳ ಮಧ್ಯೆ ಇರುವ ಎಲೆಗಳೂ ಸೇರಿದಂತೆ, ರೆಂಬೆಕೊಂಬೆಗಳ ಒಂದೊಂದೇ ಎಲೆಯನ್ನು ಹೆಕ್ಕಿಹೆಕ್ಕಿ ತಿನ್ನುತ್ತವೆ. ಅದನ್ನು ಆಂಗ್ಲಭಾಷೆಯಲ್ಲಿ ಬ್ರೌಸಿಂಗ್ (browsing) ಎನ್ನುತ್ತಾರೆ. ಜಾನುವಾರು ಸಮೂಹದಲ್ಲಿ ಆಡುಗಳಿಗಿರುವ ಹೆಕ್ಕಿಹೆಕ್ಕಿ ತಿನ್ನುವ ಗುಣ ವಿಶೇಷವಾದದ್ದು. ಆಡುಗಳ ಚಲನಾತೀತ ತುಟಿಗಳು ಹೀಗೆ ಹೆಕ್ಕಿಹೆಕ್ಕಿ ತಿನ್ನಲು ಉಪಯುಕ್ತವಾಗಿವೆ.

ಯಾವ ಸಸ್ಯದ ಎಲೆಯಾದರೇನಂತೆ? ಅದು ಹುಳಿಯಿರಲಿ, ಸಿಹಿಯಿರಲಿ, ಉಪ್ಪಿರಲಿ, ಎಷ್ಟೇ ಕಹಿಯಿರಲಿ ಆಡುಗಳು ತಿನ್ನುತ್ತವೆ. ಅದಕ್ಕಲ್ಲವೇ, ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿರುವುದು ಈ ಗಾದೆಮಾತು ಆಡಿನ ಕುಲಕ್ಕೆ ಯಾಕೆ ಬಂತು? ಯಾಕೆಂದರೆ, ಆಡುಗಳ ನಾಲಗೆಯ ಮೇಲೆ ಕಹಿಯನ್ನು ಗ್ರಹಿಸುವ ರುಚಿಗ್ರಾಹಕಗಳು ಇರುವುದಿಲ್ಲ. ವಿಜ್ಞಾನದ ಪ್ರಕಾರ ಇರುವುದು ನಾಲ್ಕು ರುಚಿಗಳು ಮಾತ್ರ. ಅವೆಂದರೆ, ಉಪ್ಪು, ಹುಳಿ, ಸಿಹಿ ಮತ್ತು ಕಹಿ. ಹುಳಿ, ಸಿಹಿ, ಉಪ್ಪಿನ ರುಚಿಗೆ ಆಡುಗಳ ನಾಲಿಗೆಯ ಮೇಲೆ ರುಚಿಗ್ರಾಹಕಗಳಿರುತ್ತವೆ. ಆದರೆ, ಕಹಿಗೆ ಆಡುಗಳ ನಾಲಗೆಯ ಮೇಲೆ ರುಚಿಗ್ರಾಹಕಗಳಿಲ್ಲ. ಇದನ್ನು ನಮ್ಮ ಪೂರ್ವಿಕರು ಹೇಗೆ ಅರಿತರು? ವಿಜ್ಞಾನಕ್ಕೂ ಮೀರಿದ ಜ್ಞಾನ ನಮ್ಮ ಹಿರಿಯರಿಗೆ ಒಲಿದು ಅವರು ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆಯನ್ನು ಕಟ್ಟಿದ್ದಾರೆ.

ಇನ್ನು ಜಪಾನಿನ ವಿಜ್ಞಾನಿಗಳು ‘ಉಮಾಮಿ’ (Umami) ರುಚಿಯನ್ನು ಐದನೇ ರುಚಿಯಾಗಿ ಸಂಶೋಧಿಸಿದ್ದಾರೆ. ಅದು ಮಸಾಲೆ ರುಚಿ, ಬಾಡೂಟದ ರುಚಿ. ಬೇರೊಂದು ಖಾರ ರುಚಿ ಇದೆಯಲ್ಲವೇ? ಖಾರದ ರುಚಿಗೆ ಪ್ರತ್ಯೇಕ ನರಗ್ರಾಹಕಗಳಿಲ್ಲ. ನೋವಿನ ಹಾಗೂ ಬಿಸಿಯ ನರಗ್ರಾಹಕಗಳೇ ಖಾರವನ್ನು ಪತ್ತೆ ಹಚ್ಚುತ್ತವೆ. ನೋವಿನ ನರಗ್ರಾಹಕಗಳು ನಾಲಗೆಯ ಮೇಲಷ್ಟೇ ಅಲ್ಲ ದೇಹದ ಎಲ್ಲಡೆ ಇರುತ್ತವೆ. ನೋವಿನ ನರಗ್ರಾಹಕಗಳು ಖಾರಕ್ಕೆ ಸ್ಪಂದಿಸುವ ಸಂಶೋಧನೆಗೆ 2021ನೇ ವರ್ಷದ ವೈದ್ಯಕೀಯ ನೊಬೆಲ್ ಪ್ರಶಸ್ತಿ ದಕ್ಕಿದೆ.

ನಮ್ಮ ಆಡುಗಳಿಗೆ ನಾವು ಸಾಮಾನ್ಯವಾಗಿ ತಂದು ಹಾಕುತ್ತಿದ್ದ ಸರ್ವೆಮರದ ಸೊಪ್ಪು ಕೂಡ ಕಹಿಯೇ. ಹಸಿರೆಲೆಗಳ ಶೇ. 6ರಿಂದ 12 ರಷ್ಟು ಟ್ಯಾನಿನ್ ಕಹಿಗೆ ಕಾರಣ. ಆಡುಗಳು ಚೆನ್ನಾಗಿ ತಿನ್ನುತ್ತವೆ. ಆದರೆ, ಕೃಷಿ ಮತ್ತು ಪಶುವೈದ್ಯಕೀಯ ಶಿಕ್ಷಣದಲ್ಲಿ ಸರ್ವೆಮರದ ಸೊಪ್ಪಿನ ಮೇವು ಉಪೇಕ್ಷೆಗೆ ಒಳಗಾಗಿದೆ. ಜಾನುವಾರುಗಳ ಮೇವಿನ ಕೊರತೆಯನ್ನು ನೀಗಿಸಲು ಹಸಿರು ಮೇವು ಕೊಡುವ ಮರಗಳನ್ನು ಬೆಳೆಸಬೇಕಿದೆ. ಮೇವು ಕೊಡುವ ಗಿಡಮರಗಳೆಂದು ಸೂಬಾಬುಲ್, ಬೇವು, ಅಗಸೆ, ಶೆವುರಿ, ಹಾಲಿವಾಣ, ಜಾಲಿ, ಕಗ್ಗಲಿ, ನುಗ್ಗೆ, ಸಿಂಟೆ, ಕಾರಾಚಿ, ಹುಣಸೆ, ಕಂಚುವಾಳ, ಉಳಿಪೆ, ಉಣ್ಣೆ ಮರ, ಬಾಗೆ, ಬಿಲ್ವಾರ, ಮಳೆಮರ, ಅರಳಿಮರ, ತಾರೆಮರ ಮುಂತಾದ ಮರಗಳನ್ನು ಪ್ರಚಾರ ಮಾಡಲಾಗಿದೆ. ಆದರೆ, ಸರ್ವೆಮರವೂ ಕೂಡ ಮೇವುಮರವೆಂದು, ಆಡುಗಳಿಗೆ ಮೇವೆಂದು ಪ್ರಚಾರ ನಡೆದಿಲ್ಲ.

ಸರ್ವೆಮರದ ಎಲೆಗಳ ಪೋಷಕಾಂಶಗಳ ಕುರಿತು ವಿದೇಶಗಳಲ್ಲಿ ಸಂಶೋಧನೆ ನಡೆದಿದೆ. ಅದರಂತೆ, ಶೇಕಡಾವಾರು ಲೆಕ್ಕದಲ್ಲಿ, ಕಚ್ಚಾ ಸಸಾರಜನಕ 6.6, ಕಚ್ಚಾ ನಾರು 21.85, ಕಚ್ಚಾ ಕೊಬ್ಬು 4.42, ಲವಣಗಳು 2.25, ಶರ್ಕರಪಿಷ್ಟಗಳು 56.64 ಮತ್ತು ನೀರಿನಾಂಶ 6. ಜೊತೆಗೆ ಹಲವಾರು ಆಂಟಿಆಕ್ಸಿಡೆಂಟ್ ಗಳಿವೆ. ಅಧಿಕ ಪ್ರಮಾಣದಲ್ಲಿ ಟ್ಯಾನಿನ್ ಇದೆ. ಇದು ಕಹಿ ಅಥವಾ ತೊಗರು ರುಚಿಗೆ ಕಾರಣ.

ಡಾ. ರಾಜಕುಮಾರ್ ಅಭಿನಯದ ಹುಲಿಯ ಹಾಲಿನ ಮೇವು ಚಿತ್ರದಲ್ಲಿ ‘ಆಸೆ ಹೇಳುವಾಸೆ’ ಹಾಡಿನ ನಂತರ ರಾಜಕುಮಾರ್ ಅವರು ಸರ್ವೆಮರದ ಕಾಯಿಯನ್ನು ಕಿತ್ತುಕೊಂಡು ಜಯಪ್ರದಾ ಅವರಿಗೆ ಗುರಿಯಿಟ್ಟು ಹೊಡೆದದ್ದು ಜಯಚಿತ್ರರವರಿಗೆ ತಾಕುತ್ತದೆ. ಆ ದೃಶ್ಯದಲ್ಲಿ ಸರ್ವೆಮರಗಳು ಯಥೇಚ್ಚವಾಗಿ ಕಾಣುತ್ತವೆ.

ಕಾಸ್ವಾರಿನಾ ಈಕ್ವಿಸೆಟಿಫೋಲಿಯಾ (Casuarina equisetifolia) ಎಂಬ ವೈಜ್ಞಾನಿಕ ಹೆಸರಿನ ಈ ಮರವನ್ನು ಚೀನಾದ ಪ್ರಮುಖವಾದ ಕ್ಯಾಂಟೋನೀಸ್ ಭಾಷೆಯಲ್ಲಿ ‘ಸರ್ವೆಮರ’ ಎಂದು ಕರೆಯಲಾಗಿದೆ. ಕೋಲಾರ ಜಿಲ್ಲೆಯ ನಮ್ಮ ಊರಿಗೆ ಸರ್ವೆಮರವು 1950-1960 ದಶಕಗಳಲ್ಲಿ ಬಂದಿರಬಹುದು. ಹೆಸರೂ ಕೂಡಾ ಚೀನಾ ಭಾಷೆಯ ಹೆಸರು. ಅದೀಗ ಕನ್ನಡದ ಹೆಸರೇ ಆಗಿಹೋಗಿದೆ.

ಭಾರತಕ್ಕೆ ಆಸ್ಟ್ರೇಲಿಯಾದಿಂದ 1820ರ ಸುಮಾರಿಗೆ ಸರ್ವೆಮರ ಬಂದಿದೆಯೆಂಬ ಚಾರಿತ್ರಿಕ ದಾಖಲೆಯಿದೆ. ಬರಗಾಲದ ಮರಮೇವಿದು. ಮೇಕೆಗಳನ್ನು 1980ರ ಆಸುಪಾಸಿನ ಬರಗಾಲದಲ್ಲಿ ಕಾಪಾಡಿದ ಮೇವು. ಆದರೆ, 1970ರ ನಂತರ ನೀಲಗಿರಿ ಸಸಿಗಳು ಬಂದವು. ಕ್ರಮೇಣ ಸರ್ವೆಮರದ ತೋಪುಗಳು ಕಾಣೆಯಾಗಿ ನೀಲಗಿರಿ ತೋಪುಗಳು ಪ್ರತ್ಯಕ್ಷವಾದವು. ‘ನೀಲಗಿರಿ ಮರ ತರುವುದು ಬರ’ ಎಂಬ ಘೋಷಣೆಯು ಲಂಕೇಶ್ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಬರವನ್ನು ಅನುಭವಿಸಿದ ಮೇಲೆ ಜಿಲ್ಲಾಡಳಿತವು ಇತ್ತೀಚೆಗೆ ನೀಲಗಿರಿ ಮರಗಳನ್ನು ತೆಗೆಯಿರಿ ಎಂದು ರೈತರಿಗೆ ಸೂಚಿಸಿದೆ. ನೀಲಗಿರಿ ತೋಪುಗಳು ಕಣ್ಮರೆಯಾಗುತ್ತಿವೆ. ಆದರೆ, ಸರ್ವೆಮರದ ತೋಪುಗಳು ಮತ್ತೆ ಹುಟ್ಟುವ ಸೂಚನೆಗಳು ಕಾಣುತ್ತಿಲ್ಲ. ಸಾರಜನಕವನ್ನು ಮಣ್ಣಿಗೆ ಹುದುಗಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಪಾಡುವ ಗುಣವು ಸರ್ವೆಮರಕ್ಕಿದೆ ಎಂಬ ಅಂಶವು ಸಂಶೋಧನೆಯಿಂದ ತಿಳಿದುಬಂದಿದೆ.

ಸರ್ವೆಮರ ಒಂದು ಅರಣ್ಯಮರ. ಕರ್ನಾಟಕ ಜೀವವೈವಿಧ್ಯ ಮಂಡಳಿ, ಕರ್ನಾಟಕ ಸರ್ಕಾರ, ಇವರು 2019ರಲ್ಲಿ ಪ್ರಕಟಿಸಿರುವ ‘ಫ್ಲೋರಾ ಆಫ್ ಕರ್ನಾಟಕ’ ಕೃತಿಯಲ್ಲಿ ಸರ್ವೆಮರದ ಉಲ್ಲೇಖವಿದೆ. ಅದೇ ಮಂಡಳಿಯು 2019ರಲ್ಲಿ ಪ್ರಕಟಿಸಿರುವ ‘ಟ್ರೇಡೇಬಲ್ ಬಯೋರಿಸೋರ್ಸಸ್ ಇನ್ ಕರ್ನಾಟಕ’ ಪುಸ್ತಕದಲ್ಲಿ ಸರ್ವೆಮರ ಕೂಡ ಮೇವಿನಮರವೆಂದು ಒಂದು ವಾಕ್ಯದ ಮಾಹಿತಿಯಿದೆ. ಕೃಷಿ ಅರಣ್ಯರೈತರ ಮತ್ತು ತಂತ್ರಜ್ಞರ ಸಂಸ್ಥೆ (ನೋಂ) ರವರು 2024ರಲ್ಲಿ ಪ್ರಕಟಿಸಿರುವ ‘ಕೃಷಿ ಅರಣ್ಯ : ರೈತರಿಗೊಂದು ಆಶಾಕಿರಣ’ ಎಂಬ ಪುಸ್ತಕದಲ್ಲಿ ನೆಡುತೋಪುಗಳಾಗಿ ಸರ್ವೆಮರ ಅಥವಾ ಗಾಳಿಮರವನ್ನು ಬೆಳೆಯಬಹುದೆಂಬ ಅಂಶವಿದೆ.

ತೋಟಗಳ ಅಂಚಿನಲ್ಲಿ ಗಾಳಿತಡೆಗೆ ಹಾಗೂ ಬೇಲಿಯಾಗಿ ಬೆಳೆಸಬಹುದು. ಸಕತ್ ಗಟ್ಟಿಮರವಾದ್ದರಿಂದ ಕಟ್ಟಡ ಕಾಮಗಾರಿಗಳಲ್ಲಿ ಕಂಬಗಳನ್ನಾಗಿ ಬಳಸಲಾಗುತ್ತದೆ. ಉರುವಲಾಗಿ ಕೂಡ ಬಳಸಲಾಗುತ್ತದೆ. ಉತ್ತಮ ಗುಣಮಟ್ಟದ ಕಾಗದ ತಯಾರಿಕೆ ಹಾಗೂ ರೇಯಾನ್ ಬಟ್ಟೆ ತಯಾರಿಕೆಯಲ್ಲೂ ಉಪಯೋಗವಿದೆ. ಹೊಗೆಸೊಪ್ಪಿನ ಸಂಸ್ಕರಣೆಯಲ್ಲಿ ಬಳಕೆಯಿದೆ. ನದಿತಟದಲ್ಲಿ, ಸಮುದ್ರತಟದಲ್ಲಿ ಭೂ ಸವಕಳಿ ತಡೆಯಲು ನೆಡಲಾಗುತ್ತದೆ. ಮರದ ತೊಗಟೆ, ಎಲೆ, ಕಾಯಿ ಮತ್ತು ಬೇರುಗಳನ್ನು ಔಷಧ ತಯಾರಿಕೆಯಲ್ಲಿ ಉಪಯೋಗಿಸಿಕೊಳ್ಳಲಾಗಿದೆ. ಅದೊಂದು ಬಹುಪಯೋಗಿ ಮರ. ಹಲವು ದೇಶಗಳ ಕರಾವಳಿ ತೀರಗಳಲ್ಲಿ ಯಥೇಚ್ಚವಾಗಿ ಕಂಡುಬರುತ್ತವೆ. ದ್ವೀಪ ರಾಷ್ಟ್ರಗಳಲ್ಲಿ ಮರದಿಂದುದುರಿದ ಕಾಯಿಗಳಿಂದ ಬೀಜಗಳು ಪಸರಿಸಿ ಎಲ್ಲಾ ಕಡೆ ಸಸಿಗಳು ಬೆಳೆದು ಮರಗಳಾಗುವುದರಿಂದ ‘ಏಲಿಯನ್’ ಮರಗಳೆನ್ನುತ್ತಾರೆ.

ಆಸ್ಟ್ರೇಲಿಯಾ, ಕೀನ್ಯಾ ಮತ್ತು ಮಲೇಶಿಯಾದಿಂದ ಬಂದಿರುವ ಸರ್ವೆಮರಗಳ ಸಂತತಿಯನ್ನು ನಾವು ಬಳಸುತ್ತಿರಬಹುದು. ಎಲ್ಲಾ ಕಾಲದ ಹಸಿರು ಮರವಿದು. ಪಾರ್ಕುಗಳಲ್ಲಿ ಅಲಂಕಾರಿಕ ಗಿಡಮರವಾಗಿ ಬೆಳೆಸುತ್ತಾರೆ. ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನೂರಾರು ವರ್ಷ ವಯಸ್ಸಿನ ಸರ್ವೆಮರಗಳಿವೆ. ಬೆಂಗಳೂರಿನ ಹೆಬ್ಬಾಳ ಕ್ಯಾಂಪಸ್ಸಿನಲ್ಲಿ ಮಂಗಳ ರೈತ ಭವನದ ಮುಂದೆ ಕನಿಷ್ಟ ಎಪ್ಪತ್ತು – ಎಂಬತ್ತು ವರ್ಷ ವಯಸ್ಸಾದ ಮೂರು ಮರಗಳಿವೆ. ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ತೋರಿಸಲಾದರೂ ಆ ಕಾಲದ ಶಿಕ್ಷಕರು ನೆಟ್ಟಿರಬಹುದು. ಅವರಿಗೊಂದು ಶರಣು.

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಅರಣ್ಯ ತಳಿ ಮತ್ತು ಮರ ಸಂತಾನೋತ್ಪತ್ತಿ ಸಂಸ್ಥೆಯು ಇಪ್ಪತ್ತೈದು ವರ್ಷಗಳಿಗೂ ಹೆಚ್ಚು ಕಾಲ ಸರ್ವೆಮರದ ಸಂಶೋಧನೆ ನಡೆಸಿದೆ. ಸುನಾಮಿಯ ಅಲೆಗಳು ದಡಕ್ಕೆ ಅಪ್ಪಳಿಸುವುದನ್ನು ಕೊಂಚಮಟ್ಟಿಗೆ ತಡೆಯಲು, ಕೃಷಿ ಅರಣ್ಯಕ್ಕೆ, ವಾಣಿಜ್ಯ ಅರಣ್ಯಕ್ಕೆ, ಪರಿಸರ ಸಮತೋಲನಕ್ಕೆ, ಅದರ ಬೇರುಗಳಲ್ಲಿರುವ ಫ್ರಾಂಕಿಯಾ ಎಂಬ ಆಕ್ಟಿನೋರೈಜಾ ಬ್ಯಾಕ್ಟೀರಿಯಾವು ವಾತಾವರಣದ ಸಾರಜನಕವನ್ನು ಮಣ್ಣಿಗಿಳಿಸುವ ಕಾರಣದಿಂದ ಮಣ್ಣಿನ ಫಲವತ್ತತೆಗೆ ಹಾಗೂ ಅರಣ್ಯೀಕರಣಕ್ಕೆ ಹೇಳಿಮಾಡಿಸಿದ ಮರವೆಂಬ ತೀರ್ಮಾನಕ್ಕೆ ಬರಲಾಗಿದೆ.

ಮರಗಿಡಗಳು ಚಿಕ್ಕವಾಗಿದ್ದಾಗ ಸರ್ವೆಮರದ ಸಾಲುಗಳ ಮಧ್ಯೆ ಅಂತರಬೆಳೆಗಳಾದ ಹುರುಳಿ, ತೊಗರಿ, ಅವರೆಯಂತವುಗಳನ್ನು ಬೆಳೆದುಕೊಳ್ಳಬಹುದು. ಶ್ರೀಗಂಧದ ಮತ್ತು ತೇಗದ ಮರಗಳನ್ನು ಬೆಳೆಸಲು ಸಹಜೀವಿತ್ವದ ಫಲವತ್ತತೆ ಕೊಡುವ ಮರಗಳನ್ನಾಗಿ ಸರ್ವೆಮರಗಳನ್ನು ಬೆಳೆಸಿರಿ ಎಂಬುದು ತಜ್ಞರ ಅಭಿಪ್ರಾಯ. ಮಿಶ್ರ ಅರಣ್ಯೀಕರಣಕ್ಕೆ ಅನುಕೂಲಕರ. ಹೊಸದಾಗಿ ಸರ್ವೆಮರಗಳ ತೋಪುಗಳನ್ನು ನೆಡಲು ಇಚ್ಚಿಸುವವರು ಅದರ ವ್ಯಾಪಾರದಲ್ಲಿ ತೊಡಗಿಕೊಂಡಿರುವವರ ಜೊತೆ ‘ಬೈ ಬ್ಯಾಕ್’ ಎಂಬ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಹುದು. ಹರಿಹರ ಪಾಲಿಫೈಬರ್ಸ್ ನವರು ಹಲವು ರೀತಿಯಲ್ಲಿ ಸರ್ವೆಮರದ ಮರಮುಟ್ಟುಗಳನ್ನು ಬಳಸುತ್ತಾರೆ.

*ಉಪಸಂಹಾರ:* ಮೇಕೆ ಸಾಕಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಶಿಕ್ಷಣ ಕ್ರಮದಲ್ಲೂ ತನ್ನ ಸ್ಥಾನವನ್ನು ಪಡೆದುಕೊಳ್ಳಬೇಕಿದ್ದ ಸರ್ವೆಮರ ತಾತ್ಸಾರಕ್ಕೆ ಒಳಗಾಗಿದೆ. ನೀಲಗಿರಿಗಿಂತ ಸರ್ವೆಮರ ಪರಿಸರಸ್ನೇಹಿ ಮರ. ಬಹೂಪಯೋಗಿ ಮರ. ವೇಗವಾಗಿ ಬೆಳೆಯುವ ಮರ. ಮೂರರಿಂದ ನಾಲ್ಕು ವರ್ಷದ ಹೊತ್ತಿಗೆ ಕಟಾವಿಗೆ ಬರುತ್ತದೆ. ರೆಂಬೆಗಳನ್ನು ಕತ್ತರಿಸಿ ಮರವು ನೇರವಾಗಿ ಬೆಳೆಯಲು ಅನುವು ಮಾಡಿಕೊಡಬೇಕು. ಕತ್ತರಿಸಿದ ಸೊಪ್ಪು ಮೇಕೆಗಳಿಗೆ ಮೇವಾಗುತ್ತದೆ. ಆಡು ಮುಟ್ಟುವ ಸೊಪ್ಪು. ಅದರತ್ತ ಕೊಂಚ ಗಮನಹರಿಸೋಣ. ಮೇಕೆ ಸಾಕಾಣಿಕೆದಾರರು ಹವ್ಯಾಸಕ್ಕಾಗಿಯಾದರೂ ನಾಲ್ಕಾರು ಸರ್ವೆಮರಗಳನ್ನು ಬೆಳೆಸಲಿ. ನನ್ನ ವಯಸ್ಸಿನ ಎರಡನೇ ದಶಕದ ಅನುಭವವನ್ನು ಈ ಬರಹದಲ್ಲಿ ನನ್ನ ಏಳನೇ ದಶಕದ ವಯಸ್ಸಿನಲ್ಲಿ ಹಂಚಿಕೊಂಡಿದ್ದೇನೆ. ಕೃಷಿ ವಿಶ್ವವಿದ್ಯಾಲಯಗಳು ಬೋಧಿಸುವ ‘ಲ್ಯಾಂಡ್ ಟು ಲ್ಯಾಬ್’ (ರೈತರ ತಾಕುಗಳಿಂದ ಪ್ರಯೋಗಾಲಯಕ್ಕೆ) ಎನ್ನುವಂತೆ ಈ ಅನುಭವವು ವಿಶ್ವವಿದ್ಯಾಲಯಗಳನ್ನು ತಲುಪಲಿ. ಮೇಕೆಗಳಿಗೆ ಮೇವಾಗುವ ಸರ್ವೆಮರದ ಸೊಪ್ಪಿನ ಸಂಶೋಧನೆ ನಡೆಸಲಿ. ಬರಡು ಭೂಮಿಯಲ್ಲಿ ಸರ್ವೆಮರ ಬೆಳೆಸಿ ಮೇಕೆಗಳಿಗೆ ಉಣಬಡಿಸಿ ಮೇಕೆ ಸಾಕಾಣಿಕೆಯನ್ನು ಬಲಪಡಿಸೋಣ. ಮೇಕೆ ಹಾಲು ಮತ್ತು ಮೇಕೆ ಮಾಂಸಕ್ಕೆ ಹೆಚ್ಚು ಬೇಡಿಕೆಯಿದೆ.

ಕೊನೆಹನಿ: ಈ ಲೇಖನ ಬರೆಯುತ್ತಿದ್ದ ಹೊತ್ತಿನಲ್ಲಿ ಸಿಕ್ಕ ಮಾಹಿತಿಯಂತೆ ಪಶುವೈದ್ಯರೊಬ್ಬರು ಸರ್ವೆಮರದ ತೋಪು ಬೆಳೆಸಿ ಮೊದಲ ಬಾರಿಗೆ ಕಟಾವು ಮಾಡಿಸುತ್ತಿದ್ದಾರಂತೆ. ಆಡಿನ ಮೇವಾಗಿ ಸರ್ವೆಸೊಪ್ಪನ್ನು ಬಳಸಬಹುದು ಎಂದು ನಾನು ಹೇಳಿದ್ದಕ್ಕೆ ಅವರು ಆಶ್ಚರ್ಯಚಕಿತರಾದರು. ಅವರಷ್ಟೇ ಅಲ್ಲದೆ ಹಲವು ಅರಣ್ಯ ವಿಜ್ಞಾನಿಗಳೂ ಕೂಡ. ಸರ್ವೆಮರದ ಸೊಪ್ಪನ್ನು ಆಡು-ಕುರಿಗಳ ಮೇವಾಗಿ ಬಳಸುವ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಮರದ ಬಹು ಉಪಯೋಗಗಳ ಗುಣಕ್ಕೆ ಮಾರುಹೋಗಿ 1881ರಲ್ಲಿಯೇ ತೊರು ದತ್ ಎಂಬ ಪ್ರಖ್ಯಾತ ಬಂಗಾಳಿ ಕವಯತ್ರಿ ಸರ್ವೆಮರ ಕುರಿತು ಆಂಗ್ಲಭಾಷೆಯಲ್ಲಿ ಕಾವ್ಯ ರಚಿಸಿದ್ದಾರೆ.

-ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು