ಅನುದಿನ‌ ಕವನ-೧೪೭೬, ಜನ ಕವಿ: ಡಾ.ಸಿದ್ಧಲಿಂಗಯ್ಯ

ಸಂಕ್ರಾಂತಿಗೆ ಡಾ. ಸಿದ್ದಲಿಂಗಯ್ಯರವರ ಕಾವ್ಯ

ಒಂದು ದನದ ಪದ

ಗೊಂತಿನ ಮುಂದೆ ನಿಲಿಸವುರೆ
ಗೂಟಕ್ಕೆ ನನ್ನ ಕಟ್ಟವರೆ
ಹಿಡಿಹಿಡಿ ಒಣಹುಲ್ಲ ಹಾಕಿ ತಾನೆ
ಮೆಚ್ಚಿಕೊಳ್ಳುತಾನೆ
ದೇವರಂಥ ಮನುಷ ನನ್ನೊಡೆಯ

ನನ್ನ ಬೆನ್ನ ಮ್ಯಾಲೆ ಬಾಸುಂಡೆ ಬರೆಯ ನೋಡಿ
ತನ್ನ ಬಲಕೆ ತಾನೆ ಮೆಚ್ಚಿಕೊಳ್ಳುತಾನೆ
ರಾಜನಂಥ ವ್ಯಗುತಿ ನನ್ನ ಧಣಿ
ಕೊಟ್ಟಿಗೇಲಿ ಕಟ್ಟಿ ನನ್ನ ಮಾತೆ ಮಾತೆ ಅನ್ನುತಾರೆ
ಮಾತಿಗೊಂದು ತೂಕಬ್ಯಾಡವ?

ಗಟ್ಟಿಹಾಲ ಕರದರೂನೆ ಹಾಲಿಗೆಲ್ಲ ನೀರಬೆರಸಿ
ಮಾರುತಾರಲ್ಲೊ ಮುಂದೇನೆ ಮಾರುತಾರಲ್ಲೊ
ಗಾಡಿದೊಂದು ಮರದ ತೂಕ ಇವರದೊಂದು ಭೀಮತೂಕ
ಹೆಜ್ಜೆಹಾಕೊ ಬಸವಣ್ಣ ಅನ್ನುತಾರಲ್ಲೊ

ಶಂಕರಾತ್ರಿ ಹಬ್ಬದೊಳಗೆ ಬೆಂಕಿಮ್ಯಾಲೆ ಹಾರಬೇಕು
ತಿಗವತೊಳೆಯದಿದ್ದೂರನೆ ಕೊಂಬಿಗೆಲ್ಲ ಹೂವಸಿಗಿಸಿ
ತಳ್ಳುತಾರಲ್ಲೊ ಬೆಂಕಿಗೆ ತಳ್ಳುತಾರಲ್ಲೊ.

-ಡಾ. ಸಿದ್ಧಲಿಂಗಯ್ಯ
(1975ರಲ್ಲಿ ಪ್ರಕಟವಾದ ಪ್ರಸಿದ್ಧ ‘ಹೊಲೆಮಾದಿಗರ ಹಾಡು’  ಕವನ ಸಂಕಲನದಿಂದ…..! )