ನಿನ್ನದೆ ಗುನುಗುನು ಗಾನದಲ್ಲಿ ತೇಲುತ್ತಿರುವೆ…
ನಾನು ಹುಡುಕಿ ಹುಡುಕಿ ನೀನು ಹಾಡುತ್ತಿದ್ದ
ಹಾಡುಗಳನ್ನೆ ನಾ ಸಂತಸದಿ ಹಾಡುತ್ತಿರುವೆ
ಗುನು ಗುನುಗುತ್ತಾ ನಿನ್ನ ಗಮನವ ಗಳಿಸಲು
ನಿನ್ನ ರಾಗಗಳ ಎಳೆಗಳನ್ನೆ ಮೀಟುತ್ತಿರುವೆ
ಮನಸ್ಸಿನ ಆಳದಲ್ಲಿ ನಿನ್ನ ರೂಪವ ಬೆಳೆಸುತ್ತಿರುವೆ.
ನೀನು ನನಗಾಗಿ ಜೋಡಿಸಿದ ಪದಗಳ
ಮೋಡಿಗಳಿಗೆ ಮರುಳಾಗುತ್ತಿದ್ದ ಗಳಿಗೆಗಳ
ಗುಣಿಸಿ ಭಾಗಿಸಿ ನೆನಪಿಸಿಕೊಂಡು ನುಡಿಸಲು
ಪಿಯಾನೋದ ಕೀಲಿಮಣೆಗಳ ನವಿರಾಗಿ
ಮುಟ್ಟುತ್ತಿರುವೆ ನಿನ್ನ ಧ್ಯಾನಿಸುವ ಚಟದಲ್ಲಿ.
ನನ್ನ ಅರಿವಿಗೆ ಬಂದಷ್ಟು ನಿನ್ನನ್ನು ಮತ್ತೆ ಮತ್ತೆ
ನನ್ನ ಮನದಾಳದೊಳಗೆ ನಿನ್ನ ತುಂಬಿ
ನಿನ್ನ ನೆನಪುಗಳ ತಬ್ಬಿಕೊಳ್ಳಲು ಈ ಹಾಡು
ನಮ್ಮಿಬ್ಬರ ಮಧುರ ಮಿಲನಗಳ ಮೆಲುಕು
ಹಾಕಲು ಮೆಲುದನಿಯ ಮನಃಪೂರ್ವಕ ಹಾಡು.
– ಮನಂ, ಬೆಂಗಳೂರು
—–