ಈ ನದಿ , ದಡ
ಹರಿವು, ಕಡಲಿನೊಡಲು
ಹದ ತಪ್ಪಿದ ಅಲೆ
ಜಾಡು ತಪ್ಪಿದ ಹೊಳೆ
ಚೆಲ್ಲಾಪಿಲ್ಲಿಯಾದ
ಆಂತರ್ಯದ ಸಂಚಿತ
ದುಗುಡ ದರ್ಶನ
ಮಾರ್ಗ ಮರೆತ
ಎಲ್ಲಾ ಸೂಚಿಗಳು
ಒಳಗನ್ನು ಕದಡಿ
ತಿರುಚಿದ ಸಂರಚನೆ
ಮೇಲ್ನೋಟದ ಸ್ನಿಗ್ಧ
ಶಾಂತತೆಯೊಂದಿಗೂ
ರಾಜಿಯಾಗದ
ಒಳಗೊಳಗಿನ ತಲ್ಲಣ
ಆತುಕೊಳ್ಳಲು ಧಾವಿಸುವ
ನದಿಯೊಳಗಿನ ಧಾವಂತ
ಕೂಡುವಾತುರದಲ್ಲೂ
ಲೆಕ್ಕಾಚಾರದ ಬಿಗುಮಾನ
ಕಡಲಿನ ಜಾಯಮಾನ
ಸಂಗಮದ ಸಮಯದಲ್ಲೂ
ನಿಧನಿಧಾನ ತಪ್ತದಾವಾನಲ
ನಿಂತ ನಿಲುವೆಲ್ಲ ನಿರಾಳವಲ್ಲ
ನೆಲದ ನೀರಭಾಷೆಗೂ
ನೀರು ನೆಲದ ಅನುವಾದಕ್ಕೂ
ಸದ್ಯಕ್ಕೆ ತಾಳಮೇಳವಿಲ್ಲ.
ಸಂಯೋಗದ ಸಂಭ್ರಮ
ಸಮೃದ್ಧತೆಯ ಅದಮ್ಯ
ಅನುಭವಕ್ಕೆ ದಕ್ಕುವುದು
ಸುಲಭವೂ ಅಲ್ಲ
-ಮಮತಾ ಅರಸೀಕೆರೆ, ಹಾಸನ ಜಿ.
—–