ಅನುದಿನ ಕವನ-೧೪೭೯, ಕವಯಿತ್ರಿ: ರೂಪ‌ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ:‌ಪದಗಳ‌ ಸಂಭ್ರಮ

ಪದಗಳ ಸಂಭ್ರಮ

ಅದೆಷ್ಟೊಂದು ಮಾತುಗಳು
ಓಡಾಡುತ್ತವೆ ದಿನವೂ
ನನ್ನಿಂದ ನಿನ್ನವರೆಗೆ,
ನಿನ್ನಿಂದ ನನ್ನಕಡೆಗೆ

ಸಾವಿರ ಸಲ ಬಳಸಿದ
ಪದಗಳೇ ಆದರೂ
ನಿನಗಾಗಿ ಬಳಸುವಾಗ
ತುಸು ಹೆಚ್ಚೇ ಪ್ರೀತಿ ಬೆರೆಸಿ
ಮೈದಾಡವಿ ಅವುಗಳನ್ನ
ಹರಿಯ ಬಿಟ್ಟಿರುತ್ತೇನೆ
ನಿನ್ನಡೆಗೆ ಭಾವುಕಳಾಗಿ …

ಅದನ್ನು ಓದುತ್ತಾ ಕಣ್ತುಂಬಿಕೊಂಡು ,
ನೀ ಕಳಿಸಿಕೊಡುವ ಪ್ರೀತಿಯ
ಸಾಲುಗಳಿಗೆಲ್ಲಾ ಅದೇನು
ಸಂಭ್ರಮವೋ ನನ್ನೆಡೆಗೆ
ಕುಣಿಯುತ್ತಾ ಬರುವಾಗ….

ಮನೆಯಿಂದ ಮನೆಗೆ
ಓಡಾಡುತ್ತಾ, ಬೆಲ್ಲ ಕೇಳಿ
ತಿನ್ನುವ ಪುಟ್ಟ ಮಕ್ಕಳಂತೆ
ನಾವು ಬರೆಯುವ
ಪದಗಳಿಗೆಲ್ಲ ಈಗ ಮತ್ತೆ
ಬಾಲ್ಯದ ಸಿಹಿ ಸಂಭ್ರಮ..

‌-ರೂಪ ಗುರುರಾಜ್, ಬೆಂಗಳೂರು