ಬಳ್ಳಾರಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ರಾಜೀನಾಮೆ ನೀಡಿ, ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಜಿಲ್ಲಾಸಮಿತಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಓಂಕಾರಪ್ಪ ಕಪ್ಪಗಲ್ಲು, ಸಂಗನಕಲ್ಲು ವಿಜಯಕುಮಾರ್ ಮಾತನಾಡಿ, ದೆಹಲಿಯ ಸಂಸತ್ ನಲ್ಲಿ ಕಳೆದ ಡಿ.17 ರಂದು ಮಾತನಾಡಿರುವ ಕೇಂದ್ರದ ಗೃಹಸಚಿವ ಅಮಿತ್ ಶಾ ಅವರು, ಅಂಬೇಡ್ಕರ್ ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು ಒಂದು ಫ್ಯಾಷನ್ ಆಗಿದೆ. ಇಷ್ಟು ಬಾರಿ ದೇವರ ಹೆಸರು ಹೇಳಿದ್ದರೆ ಏಳೇಳು ಜನ್ಮಕ್ಕೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ್ದಾರೆ. ಜೊತೆಗೆ ತಾವು ಆಡಿರುವ ಮಾತುಗಳನ್ನು ಸಮರ್ಥನೆಯನ್ನೂ ಮಾಡಿಕೊಂಡಿದ್ದಾರೆ. ಅಮಿತ್ ಶಾ ಅವರ ಮಾತುಗಳನ್ನು ಖಂಡಿಸಬೇಕಿದ್ದ ಪ್ರಧಾನಿ ನರೇಂದ್ರ ಮೋದಿ, ಮತ್ತು ಆತನ ಸಹೋದ್ಯೋಗಿಗಳು ಗೃಹ ಸಚಿವರ ಬೆನ್ನಿಗೆ ನಿಂತಿದ್ದಾರೆ. ಇಂಥಹವರಿಂದ ನಾವು ಯಾವುದೇ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ಪ್ರತಿಯೊಬ್ಬರೂ ಸಹ ಇದನ್ನು ಖಂಡಿಸಲೇಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವದ ಪಿತಾಮಹ ಡಾ. ಬಿ.ಆರ್.ಅಂಬೇಡ್ಕರ್ ಅವರು ಮತ್ತು ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ರಾಷ್ಟ್ರ ದ್ರೋಹ ಪ್ರಕರಣವನ್ನು ದಾಖಲಿಸಬೇಕು. ಜೊತೆಗೆ ಅವರನ್ನು ಗಡಿಪಾರು ಮಾಡಬೇಕು. ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಅಂಬೇಡ್ಕರ್, ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಅವರನ್ನು ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಬೇಕು. ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಸಹ ಕೇಂದ್ರ, ರಾಜ್ಯ ಸರ್ಕಾರಗಳು ಸರಿಯಾದ ದಿಟ್ಟ ಕ್ರಮಕೈಗೊಳ್ಳುತ್ತಿಲ್ಲ. ಆದ್ದರಿಂದ ದಲಿತರ ಮೇಲೆ ದೌರ್ಜನ್ಯ ನಡೆದರೆ ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯ ಖಜಾಂಚಿ ಕೆ.ನಾಗರಾಜ, ಜಿಲ್ಲಾ ಸಂಚಾಲಕ, ಸಿ.ಲಿಂಗಪ್ಪ, ಜಿಲ್ಲಾ ಸಂಚಾಲಕ ಚಂದ್ರ, ಹನುಮಂತ, ಖಾದರಲಿಂಗ, ಹೊನ್ನೂರ ಬಾದನಹಟ್ಟಿ, ಹೊನ್ನೂರಪ್ಪ ಕಪ್ಪಗಲ್ಲು, ನಾಗೇಂದ್ರ ಮೋಕಾ ಸೇರಿದಂತೆ ಹಲವರು ಇದ್ದರು.
—–