ಬಳ್ಳಾರಿ, ಜ.30: ಇಡೀ ವಿಶ್ವವೇ ಕ್ರೌರ್ಯದ ಹಾದಿಯಲ್ಲಿದ್ದಾಗ ಗಾಂಧಿ ಹಿಡಿದ ಆಯುದವೇ ಅಹಿಂಸೆ ಎಂದು ಬಿಮ್ಸ್ ನ ಪ್ರಾಧ್ಯಾಪಕಿ ಡಾ. ದಿವ್ಯಾ ಕೆ ಎನ್ ಅವರು ತಿಳಿಸಿದರು.
ನಗರದ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಗುರುವಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಗಾಂಧಿ ವಿಚಾರ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಇಂತಹ ವ್ಯಕ್ತಿ ಒಬ್ಬ ದೇಹದಾರಿಯಾಗಿ ನೆಲದ ಮೇಲೆ ನಡೆದಾಡಿದ ಎಂಬುದನ್ನು ಮುಂದಿನ ಪೀಳಿಗೆ ನಂಬುವುದು ವಿರಳ ಎಂಬ ಆಲ್ಬರ್ಟ್ ಐನ ಸ್ಟಿನ್ ಅವರ ಅಭಿಪ್ರಾಯ ಇಂದು ನಿಜವಾಗುತ್ತಿದೆ ಎಂದು ಹೇಳಿದರು.
ಅಹಿಂಸೆ ಮೂಲಕ ಒಳ್ಳೆಯದನ್ನ ಸಾಧಿಸಬಹುದು ಎನ್ನುವುದಕ್ಕೆ ಗಾಂಧೀಜಿಯವರೇ ಪ್ರೇರಣೆ. ಇದಕ್ಕೆ ಅವರ ನೈತಿಕ ಪ್ರಜ್ಞೆ ಮೂಲ ಕಾರಣ, ಗುರಿ ಮುಟ್ಟುವುದಕ್ಕಿಂತ ಗುರಿ ಸಾಧನೆಯ ಮಾರ್ಗ ಮುಖ್ಯ ಅದಕ್ಕೆ ನೈತಿಕ ಮಾರ್ಗಗಳನ್ನು ಅನುಸರಿಸಬೇಕೆಂದು ಹಾಗೂ ಕ್ರಿಯಾಶೀಲ ಚಳುವಳಿಯ ಗಾಂಧೀಜಿಯವರ ಯಶಸ್ಸಿನ ಕೀಲಿ ಕೈ ಅವರು ಸರ್ವೋದಯವನ್ನು ಬಯಸಿದವರಾಗಿದ್ದರು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಠೋಬಾ ಹೊನಕಾಂಡೆ ಅವರು ಗಾಂಧಿ ವಿಚಾರಗಳು ಕೇವಲ ಪೂಜೆ ಪುನಸ್ಕಾರ ಆರಾಧನೆಗೆ ಮಾತ್ರ ಸೀಮಿತವಾಗಿವೆ ಎಂದು ವಿಷಾಧಿಸಿದರು.
ಗಾಂಧಿವಾದ ಪ್ರತಿರೋಧವಾಗಿದೆ. ನೈಜ ಗಾಂಧಿವಾದ, ಗಾಂಧಿ ವಿಚಾರಗಳನ್ನು ಮುಟ್ಟಿಸುವಲ್ಲಿ ಸೋತಿದ್ದೇವೆ ಎಂದು ತಿಳಿಸಿದರು.
ಅಲ್ಲದೇ ಗಾಂಧೀಜಿಯವರ ಬಗೆಗಿನ ಸತ್ಯಾಂಶವನ್ನು ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಮೊರಾರ್ಜಿ ದೇಸಾಯಿ ಪಿಯು ಕಾಲೇಜಿನ ಪ್ರಾಂಶುಪಾಲರು ಗಾಂಧೀಜಿಯವರ ಸರಳತೆ ನೆಮ್ಮದಿಯ ಬದುಕಿಗೆ ಸಹಕಾರಿ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಸತಿ ಶಾಲೆಯ ಪ್ರಾಂಶುಪಾಲ ಮೂಕಪ್ಪ ಕೆ ಎಂ ಅವರು ಗಾಂಧೀಜಿ ಮೌಲ್ಯಗಳು ವಿದ್ಯಾರ್ಥಿಗಳಿಗೆ ಸನ್ಮಾರ್ಗದಲ್ಲಿ ಬದುಕುಕಟ್ಟಿಕೊಳ್ಳಲು ದಾರಿದೀಪಗಳಿದ್ದಂತೆ ಎಂದರು.
ಗಾಂಧಿ ವಿಚಾರ ವೇದಿಕೆ ಕಾರ್ಯದರ್ಶಿ ಡಾ. ನಾಗರಾಜ್ ಬಸರಕೋಡು ಅವರು ಶಾಲೆಗಳಲ್ಲಿ ಗಾಂಧೀಜಿಯವರ ವಿಚಾರಗಳ ಚರ್ಚೆ ಯಾಕೆ ಅನಿವಾರ್ಯ ಎಂದು ತಿಳಿಸಿದರು.
ಗಾಯಕ ಜಡೇಶ್ ಎಮ್ಮಿಗನೂರು ಅವರು ರಾಷ್ಟ್ರಕವಿ ಗಳಾದ ಕುವೆಂಪು ಹಾಗೂ ಜಿ. ಎಸ್ ಶಿವರುದ್ರಪ್ಪ ಅವರ ಭಾವಗೀತೆಗಳಿಗೆ ಧ್ವನಿ ನೀಡಿ ಮಕ್ಕಳ ಮನಸೂರೆಗೊಂಡರು.
ಶಿಕ್ಷಕ ರಂಗಪ್ಪ ಸ್ವಾಗತಿಸಿದರು. ಶ್ರೀಮತಿ ಶಾಂತಿ ಕುಮಾರಿ ಜಿ ನಿರೂಪಿಸಿದರು, ಪರಮೇಶ್ವರ್ ಬಿ ಅವರು ವಂದಿಸಿದರು.
ಬೋಧಕ ಬೋಧಕೇತರ ಸಿಬ್ಬಂದಿ ಹಾಜರಿದ್ದರು.
—–