ಫೆ. 2, 2025ರಂದು ಭಾನುವಾರ ಕರ್ನಾಟಕ ಜಾನಪದ ಪರಿಷತ್ತಿನ ರಾಮನಗರದ ಜಾನಪದಲೋಕದಲ್ಲಿರುವ ‘ಗಿರಿಜನ ಲೋಕ’ ವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಲೋಕಾರ್ಪಣೆಗೊಳಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರುಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಡಾ.ಹಿ. ಚಿ. ಬೋರಲಿಂಗಯ್ಯ, ಮ್ಯಾನೇಜಿಂಗ್‌ಟ್ರಸ್ಟಿ ಆದಿತ್ಯ ನಂಜರಾಜ್ ಮತ್ತಿತರ ಗಣ್ಯರು ಉಪಸ್ಥಿತರಿರುವರು. ಗಿರಿಜನ ಲೋಕ ಲೋಕಾರ್ಪಣೆ ಹಿನ್ನಲೆಯಲ್ಲಿ ಸಾಹಿತಿ ಡಾ. ಬ್ಯಾಡರಹಳ್ಳಿ ಶಿವರಾಜ್‌ಅವರ ಲೇಖನವನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಪ್ರೀತಿಯಿಂದ ಪ್ರಕಟಿಸುತ್ತಿದೆ.
(ಸಿ.ಮಂಜುನಾಥ ಸಂಪಾದಕರು ಹಾಗೂ ಕರ್ನಾಟಕ ಜಾನಪದ ಪರಿಷತ್, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರು)
ಕರ್ನಾಟಕದಲ್ಲಿ ಜಾನಪದ ಲೋಕಕ್ಕೆ ತನ್ನದೇ ಆದ ಹೆಜ್ಜೆಗುರುತುಗಳಿವೆ.ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕದ ಮೂಲಕ ಹಲವು ವೈವಿಧ್ಯಮಯ ಕಾರ್ಯಗಳನ್ನು ಮಾಡುತ್ತಾ ಬಂದಿದೆ.ಸಾಹಿತ್ಯ, ಕಲೆ, ನರ್ತನ, ಸಾಕ್ಷ್ಯಚಿತ್ರ ನಿರ್ಮಾಣ, ಗ್ರಂಥ ಸಂಪಾದನೆ, ವಸ್ತು ಸಂಗ್ರಹಾಲಯ ಗಳಂತಹ ಅಮೂಲ್ಯ ಪರಿಕರಗಳನ್ನು ಕಾಪಿಟ್ಟುಕೊಂಡು ಈ ತಲೆಮಾರಿಗೆ ಅದರ ಅರಿವು ಮತ್ತು ಪರಂಪರೆಯನ್ನು ಬೆಳೆಸುವಲ್ಲಿ ಅಪಾರ ಶ್ರಮವಹಿಸುತ್ತಾ ಬಂದಿದೆ. ಮೈಸೂರು ಬೆಂಗಳೂರು(ರಾಮನಗರ) ರಸ್ತೆ ಹೆದ್ದಾರಿಯಲ್ಲಿ ವಿಶಾಲವಾದ ಜಾಗದಲ್ಲಿ ಮೈವೆತ್ತಿರುವ ಜಾನಪದ ಲೋಕ ಕರ್ನಾಟಕ ಜಾನಪದ ಕ್ಷೇತ್ರದ ಹೆಗ್ಗುರುತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವವರಿಗೆಲ್ಲ ಜಾನಪದ ಲೋಕ ಆಕರ್ಷಣೆಯ ಕೇಂದ್ರ. ಪುಸ್ತಕ ಪ್ರಕಟಣೆ, ಜಾನಪದ ಜಗತ್ತು, ವಾರ್ಷಿಕ ಜಾನಪದ ಲೋಕ ಪ್ರಶಸ್ತಿ, ಹಲವು ದತ್ತಿ ಪ್ರಶಸ್ತಿ ಗಳನ್ನು ನೀಡುತ್ತಾ ಬಂದಿರುವ ಕರ್ನಾಟಕದಲ್ಲಿ ಜಾನಪದ ಲೋಕಕ್ಕೆ ತನ್ನದೇ ಆದ ಹೆಜ್ಜೆಗುರುತುಗಳಿವೆ.
ಜಾನಪದ ಲೋಕದಲ್ಲಿ ಜೇನು ಕುರುಬರು, ಗೊಂಡರು, ಮಲೆ ಕುಡಿಯರು, ಹಾಲಕ್ಕಿ ಒಕ್ಕಲಿಗರು, ಗೌಳಿಗರು ಹೀಗೆ ಐದು ಬುಡಕಟ್ಟು ಕುಟೀರಗಳಿವೆ. ಕರ್ನಾಟಕದ ಬುಡಕಟ್ಟು ಸಮುದಾಯಗಳ ಆಚಾರ, ಸಂಸ್ಕೃತಿ,ಯಿಂದ ವಿಭಿನ್ನವಾಗಿವೆ. ಆದರೆ ಶಿಕ್ಷಣ ದಿಂದ ವಂಚಿತವಾಗಿರುವ ಹಲವು ಬುಡಕಟ್ಟು ಜನರು ಇಂದಿಗೂ ಬೆಟ್ಟ ಗುಡ್ಡಗಳಲ್ಲಿ ತಮ್ಮದೇ ಆದ ವಿಶಿಷ್ಠ ಆಚರಣೆ, ಭಾಷೆ, ಮಡಿ, ಮದುವೆ, ಕಲೆ, ಬದುಕು, ಉಡುಪು ಆಹಾರ, ಕ್ರಮಗಳಿಂದ ನಾಗರೀಕ ಸಮಾಜಕ್ಕಿಂತ ಭಿನ್ನವಾಗಿವೆ. ಈ ಸಮುದಾಯಗಳಿಗೆ ನಿರ್ಧಿಷ್ಟ ವಾದ ಊರು ಕೇರಿಗಳಿಲ್ಲದೆ ಆತಂತ್ರರಾಗಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇಂತಹ ತಬ್ಬಲಿ ಸಮುದಾಯಗಳು ಒಂದು ನೆಲೆಕಂಡು ಕೊಳ್ಳಲಾಗುತ್ತಿಲ್ಲ. ನಾಗರೀಕ ಸಮಾಜದಿಂದ ಹೊರಗೆ ಬದುಕು ಸವೆಸುತ್ತಿದ್ದಾರೆ.
ಬುಡಕಟ್ಟು ಸಮುದಾಯದ ಕಲೆಗಳು ವಿಶಿಷ್ಟ ವಾಗಿರುತ್ತವೆ. 2002 ರಲ್ಲಿ ಡಾ.ಎಚ್.ಎಲ್.ನಾಗೇಗೌಡ ಅವರು ನಾಡೋಜ ಗೌರವವನ್ನು ಸ್ವೀಕರಿಸಲು ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಬುಡಕಟ್ಟು ಅಧ್ಯಯನ ವಿಭಾಗದಿಂದ ರೂಪಿಸಿರುವ ‘ಗಿರಿಸೀಮೆ’ಯನ್ನು ನೋಡಿ ಜಾನಪದಲೋಕದಲ್ಲಿಯೂ ಈ ಬಗೆಯ ಗಿರಿಜನರ ಹಟ್ಟಿಗಳು ಆಗಬೇಕೆಂದು ಪ್ರೊ. ಹಿ.ಚಿ.ಬೋರಲಿಂಗಯ್ಯ ಅವರ ಜೊತೆ ಮಾತನಾಡುತ್ತಾ ತನ್ನ ಕನಸನ್ನು ಹಂಚಿಕೊಂಡರು. ತರುವಾಯ 21 ವರ್ಷಗಳ ನಂತರ ಜಾನಪದ ಲೋಕದಲ್ಲಿ ಪ್ರೊ.ಹಿ.ಚಿ ಬೋರಲಿಂಗಯ್ಯ ಅವರ ಕಲ್ಪನೆಯಲ್ಲಿಯೇ ಬುಡಕಟ್ಟು ಹಟ್ಟಿಗಳನ್ನು ಕಟ್ಟಿ ಅಂಗಳದ ಮುಂದೆ ಕಲಾವಿದ ರಾಜು ಹರ್ಷ ಸೊಲಬಕ್ಕನವರ್ ರೂಪಿಸಿರುವ ಸ್ತಬ್ದ ಚಿತ್ರಗಳು ಸಹಜವಾಗಿಯೇ ಮನಸೂರೆಗೊಳ್ಳುತ್ತವೆ. ಒಳಗೆ, ಹಸೆ ಚಿತ್ತಾರ, ರಂಗೋಲಿ, ಛಾಯಾ ಚಿತ್ರಗಳು, ಹೊರ ಮೈ ಪದರದಲ್ಲಿ ಸಗಣಿ ಬಳಸಿ ತಾರಸಿದ ಹೊದಿಕೆ,ಹುಲ್ಲುಹಾಸಿನ ಛಾವಣಿ ಹಾಕಿ ಬುಡಕಟ್ಟು ಜನರು ವಾಸಿಸುವ ಹಾಡಿ ಹಟ್ಟಿಗಳ ಕುರುಹಾಗಿ ನಿರ್ಮಿಸಿರುವುದು ವಿಶೇಷವಾಗಿದೆ.
ಕರ್ನಾಟಕದ ಪ್ರಮುಖ ಬುಡಕಟ್ಟು ಸಮುದಾಯವಾದ
1)ಜೇನು ಕುರುಬರು : ಬೆಂಕಿ ಮತ್ತು ನಾಯಿ ಪ್ರತಿ ಬುಡಕಟ್ಟು ಜನಾಂಗದ ಜೀವನಾಡಿಯಾಗಿರುತ್ತದೆ. ಬೆಂಕಿ ಗುಂಡಿಯಲ್ಲಿ ನಿರಂತರವಾಗಿ ಉರಿಯುತ್ತಿರುತ್ತದೆ. ಆಧುನಿಕತೆಗೆ ಇನ್ನೂ ಒಗ್ಗದ ಜೇನು ಕುರುಬರು ತಮ್ಮ ವಿಶಿಷ್ಟ ಆಚರಣೆ ನಂಬಿಕೆ ಕುಣಿತಗಳಿಂದ ವಿಶೇಷವಾಗಿ ಕಾಣಬಯಸುತ್ತಾರೆ. ಕರ್ನಾಟಕದ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಮತ್ತು ತಮಿಳುನಾಡಿನ ನೀಲಗಿರಿಯ ನಡುಮಲೆ ಮಸಣಿ ಗುಡಿಗಳಲ್ಲೂ ವಾಸಮಾಡುತ್ತಿದ್ದಾರೆ. ಸುಮಾರು 210 ಹಾಡಿಗಳಲ್ಲಿ ವಾಸಮಾಡುವ ಇವರು ಜೇನು ಕೀಳುವುದು ಇವರ ಕುಲಕಸುಬು. ಈ ಕೌಶಲ್ಯದಲ್ಲಿ ವಿಶಿಷ್ಟ ನಂಬಿಕೆ ಮತ್ತು ಪರಿಣತಿ ಪಡೆದುದರಿಂದ ಇವರನ್ನು ಜೇನು ಕುರುಬರು ಎಂದು ಕರೆಯುತ್ತಾರೆ.ಇವರ ಹಾಡಿಯ ನೆನಪಿಗೆ ‘ಗಿರಿಜನ ಲೋಕ’ದಲ್ಲಿ ಮೊದಲು ಎದುರಾಗುವುದೇ ಜೇನು ಕುರುಬರ ಹಟ್ಟಿ. ಈ ಹಟ್ಟಿಯ ಹೊರಗೆ ಬಿದಿರು ಬೊಂಬು ಗಳಿಂದ ನಿರ್ಮಿಸಿರುವ ಬೇಲಿ, ರಾಗಿ ಬೀಸುವ ಕಲ್ಲು ಮನೆಯ ಅಂಗಳ, ಮನೆಯ ಒಳಗೆ ಸೌದೆಯಿಂದ ಉರಿಸುವ ಒಲೆ, ಅಟ್ಟ, ಎಲ್ಲವೂ ಹಾಡಿಯನ್ನು ನೆನಪಿಸುವಂತೆ ರೂಪಿಸಲಾಗಿದೆ. ನೆಲ ನೋಡಿದ ಕೂಡಲೇ ಸಗಣಿಯಿಂದ ಸಾರಿಸಿದ ನೆನಪು ಹಿಂದಕ್ಕೆ ಹೋಗುತ್ತದೆ. ಗೋಡೆಗಳ ಮೇಲೆ ರಂಗೋಲಿಯ ಚಿತ್ತಾರ, ಹಲವು ಸಂಪ್ರದಾಯ ನಂಬಿಕೆಗಳನ್ನು ನೆನಪಿಸುತ್ತದೆ ಪ್ರಧಾನವಾಗಿ ಭೇಟೆ ಸಂಸ್ಕೃತಿ ಯಿಂದ ಬಂದ ಜೇನು ಕುರುಬರು ತಮ್ಮ ಬದುಕಿನುದ್ದಕ್ಕೂ ನಾಯಿ ಜೊತೆಯಲ್ಲಿದ್ದು ಕೊಂಡು ಬದುಕು ಸಾಗಿಸುವ ವಿಶಿಷ್ಟ ಬದುಕು ಇವರದಾಗಿರುವುದರಿಂದ ನಾಯಿಯ ಸ್ತಬ್ದ ಚಿತ್ರ ಎಲ್ಲಾ ಹಟ್ಟಿ ಗಳ ಮುಂದೆಯೇ ವಿರಾಜಮಾನವಾಗಿರುವ ಭೇಟೆಯ ಸಂಕೇತವಾಗಿದೆ. ಇವರ ಮನೆಗಳು ಪರಿಸರ ಸ್ನೇಹಿಯಾಗಿರುವುದು ಮತ್ತು ಹಟ್ಟಿಗೆ ಏನೂ ಅನಾಹುತವಾಗದಿರಲೆಂದು ಸೋರೆ ಬುರುಡೆ-ಮೂಳೆ ಯನ್ನು ಅಡುಗೆ ಮಾಡುವ ಒಲೆಯ ನೇರಕ್ಕೆ ಛಾವಣಿಗೆ ಕಟ್ಟಿರುತ್ತಾರೆ. ಅದೂ ಕೂಡ ಇಲ್ಲಿ ಬಳಸಲಾಗಿದೆ. ಗೋಡೆಗೆ ನೇತಾಕಿರುವ ಚಿತ್ರಗಳು ಜೇನುಕುರುಬರ ನಂಬಿಕೆ, ನೃತ್ಯ, ದೈವಾರಾಧನೆ ಕುರಿತ ಛಾಯಾ ಚಿತ್ರಗಳು ಜೇನು ಕುರುಬರ ಸಂಸ್ಕೃತಿಯನ್ನು ನೋಡುಗರಿಗೆ ಬಿಂಬಿಸಿ ‘ಹಟ್ಟಿ’ ಗಳ ಗೋಡೆಗಳನ್ನು ಮುಟ್ಟಿ ತಟ್ಟುವಂತೆ ಮನಸ್ಸು ತುಡಿಯುತ್ತದೆ. ಹಟ್ಟಿಗಳು ವಿಶಾಲವಾಗಿದ್ದು ಒಳಗೆ ಅಡಿಗೆ ಕೋಣೆ, ಅಟ್ಟ, ಅಂಗಳ ಒಳಕಲ್ಲು ಗಳಿದ್ದು ಮೋಟು ಗೋಡೆ ಇವುಗಳು ಒಂದು ಕಾಲದ ಹಳ್ಳಿಯ ಮನೆ ನೆನಪಿಸಿಸಿದರೂ ಹಟ್ಟಿಗಳ ಮನೆ ವಿನ್ಯಾಸದಲ್ಲಿ ಈಗಲೂ ಬದಲಾಗಿಲ್ಲ.ಮೇಲ್ಛಾವಣಿಗೆ ಹುಲ್ಲು ಹೊದಿಕೆಯಾಗಿದ್ದು ನೋಡಿದ ಕೂಡಲೇ ‘ಹುಲ್ಲು ಮನೆ’ಗಳು ನೆನಪಾಗುತ್ತವೆ.
2) ಗೊಂಡರು : ಇವರು ಕೃಷಿ ಪ್ರಧಾನವಂತ ಸಮುದಾಯ ಉತ್ತರ ಕನ್ನಡದ ಭಟ್ಕಳ ತಾಲ್ಲೂಕಿನ ಕಡೆ ಹೆಚ್ಚಾಗಿ ವಾಸಿಸುತ್ತಾರೆ. ಆದರೂ ಶಿವಮೊಗ್ಗ ಜಿಲ್ಲೆಯ ಸಾಗರದ ಕಡೆ ಚದುರಿ ಹೋಗಿದ್ದಾರೆ.ಇವರ ಹಟ್ಟಿಯ ಮುಂದೆ ಮೇಟಿಯನ್ನು ನೆಟ್ಟಿರುತ್ತಾರೆ.ಅದರಲ್ಲಿ ಒಕ್ಕಣಿಕೆ,ತೂರುವುದು ಮಾಡುತ್ತಾ ಭತ್ತವನ್ನು ತುಂಬಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ತಟ್ಟಿ ಗೋಡೆಮನೆ,ಗೋಡೆ ಮನೆ,ಕಲ್ ಗೋಡೆ ಮನೆಯೆಂದೂ ಕಟ್ಟಿಕೊಳ್ಳುತ್ತಾರೆ. ಕಿಟಕಿ ಬಾಗಿಲುಗಳು ಚಿಕ್ಕದಾಗಿದ್ದು ಹೊದಿಕೆಯನ್ನು ಜೋಡಿಸಿ ಹುಲ್ಲಿನ ಮನೆ ಅಥವಾ ಹೆಂಚಿನ ಮನೆ ಕಟ್ಟುತ್ತಾರೆ. ಇದರ ಕುರುಹಾಗಿ ಗಿರಿಜನ ಲೋಕದಲ್ಲಿ ನಿಂತಿರುವ ಗೊಂಡರ ಮನೆಯು ಆಕಾರ ಮತ್ತು ವಿನ್ಯಾಸದಲ್ಲಿ ವಿಶಿಷ್ಟ ವಾಗಿದೆ. ಕೃಷಿಯನ್ನು ಪ್ರಧಾನವಾಗಿ ನಂಬಿ ಬದುಕುವುದರಿಂದ ಹಟ್ಟಿಯ ಗೋಡೆಗಳ ಮೇಲೆ ಭತ್ತದ ತೆನೆಸಾಲು, ಸೂರ್ಯ, ಕಾಳು, ಪ್ರಕೃತಿ ಚಿತ್ತಾರದ ಮೂಲಕ ಗೋಡೆಗೆ ಅಂದ ಬರುವಂತೆ ಮಾಡಲಾಗಿದೆ.ಮನೆಯ ಇಕ್ಕೆಲಗಳಲ್ಲಿ ‘ಜಟ್ಟಿಗ ಬನ’ನಿರ್ಮಿಸಿಕೊಂಡು ಅಲ್ಲಿ ಹಂದಿ,ಹುಲಿ, ದೇವರ ಆಕೃತಿಗಳನ್ನು ಮರದಿಂದ ಕೆತ್ತನೆ ಮಾಡಿಸಿ ಪೂಜಿಸುವ ಭಕ್ತಿಯೂ ಇದೆ. ಇದರ ಚಿತ್ರಗಳು ಮನೆಯ ಗೋಡೆಯ ಒಳಗೆ ನೇತುಹಾಕಲಾಗಿದೆ. ಅಂಗಳದ ಸೂರಿನಲ್ಲಿ ಬೆಳಕಿಗಾಗಿ ಲಾಟೀನು ತೂಗು ಹಾಕಲಾಗಿದ್ದು ನೆರಕೆ ಕಟ್ಟಿಕೊಂಡು ಸ್ನಾನಕ್ಕೆ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಮಾಂಸ ಹಾರಿಗಳಾದ ಇವರಿಗೆ ಕೋಳಿಸಾಕುವ ಹವ್ಯಾಸವೂ ಇದೆ. ಇದರಿಂದ ಚೆಲ್ಲಿದ ಕಾಳು ಕಡ್ಡಿಗಳು ಆಯ್ದು ತಿನ್ನುವ ಕೋಳಿಗಳ ಪಾಲಾಗುತ್ತವೆ ಇದರಿಂದ ಕೋಳಿಗಳು ಮರಿ ಮಾಡುತ್ತ ತನ್ನ ಸಂತತಿ ಯನ್ನು ಹೆಚ್ಚಿಸಿಕೊಳ್ಳುವ ಕೊಳ್ಳುವ ಸಣ್ಣ ಸ್ವಾವಲಂಬಿ ಬದುಕಿಗೂ ಆಸರೆಯಾಗುತ್ತದೆ.
ಇದೆಲ್ಲವೂ ಈ ಹಟ್ಟಿಗಳನ್ನು ನೋಡಿದಾಗ ನಿಸರ್ಗದಲ್ಕಿ ನೆಲೆ ನಿಂತಿರುವ ಪಡಿ ಹಚ್ಚಿನಂತೆ ಕಣ್ಣಿಗೆ ಕಾಣುತ್ತದೆ. ಅದೇ ಮಾದರಿಯಲ್ಲಿ ನಿರ್ಮಾಣವಾಗಿರುವ ಹಟ್ಟಿಗಳು ಕಣ್ಣ ಮುಂದೆ ಬರುತ್ತವೆ. ಮನೆಯ ಅಕ್ಕ ಪಕ್ಕದಲ್ಲಿ ಬಸರಿ,ಬ್ಯಾಲ,ತೂಪುರ ,ತಾರೀ ಮರ,ಹೊಂಗೆ ಆಲೆ ಮರ,ಹೊಳೆ ಮತ್ತಿ, ಅಂಟುವಾಳ ಗಿಡಗಳು ಬೆಳೆಯುವ ಹಂತದಲ್ಲಿದ್ದು ತಮಗೆ ನಿತ್ಯ ಬೇಕಾಗುವ ಜಾತಿವರ್ಗ ಗಿಡ ನಾರು ಬೇರುಗಳಿಂದ ಆರೋಗ್ಯದ ಕಡೆಗೂ ಕಾಳಜಿ ವಹಿಸುವ ಗೊಂಡರು ನಿಸರ್ಗವನ್ನು ತಾಯಿಯಂತೆ ಪೂಜಿಸುತ್ತಾರೆ.
3) ಮಲೆ ಕುಡಿಯರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ,ಸುಳ್ಯ,ಬೆಳ್ತಂಗಡಿ ಭಾಗಗಳಲ್ಲಿ ಮಲೆ ಕುಡಿಯರು ವಾಸವಾಗಿದ್ದರೆ ವಿರಾಜಪೇಟೆ ಮತ್ತು ಮಡಿಕೇರಿಯ ಕಡೆ ಕುಡಿಯರು ವಾಸವಾಗಿದ್ದಾರೆ.ಈ ಕುಡಿಯ ಮತ್ತು ಮಲೆ ಕುಡಿಯರು ಬೇರೆ ಬೇರೆ ಯಾಗಿದ್ದುಇವರ ಕುಲ ಮೂಲ ಕಥೆಗಳು ಭಿನ್ನವಾಗಿವೆ.ಇವರು ವಾಸ ಮಾಡುವ ಮನೆಯನ್ನು ‘ಇಲ್’ ಎಂದು ಕೊಳ್ಳುವರು.ವಿಶಿಷ್ಟ ಆಚರಣೆ ನಂಬಿಕೆ ಯಿಂದ ಬದುಕುವ ಇವರು ಒಲೆ ಮೇಲೆ ಮಾಂಸ ಬೇಯಿಸಿಕೊಂಡು ಭಗಿನಿ ಮರದಿಂದ ಇಳಿಸಿದ ಹೆಂಡ ವನ್ನು ಸೇವಿಸುತ್ತಾ ಬದುಕನ್ನು ಸಂತೋಷ ಉಲ್ಲಾಸವಾಗಿ ಸ್ವೀಕರಿಸುವ ಈ ಸಮುದಾಯ ಎಲ್ಲ ಕಡೆಯೂ ಮನೆಯನ್ನು ನಿರ್ಮಿಸಿಕೊಳ್ಳುವುದಿಲ್ಲ.ನೀರು ಎಥೇಚ್ಚ ವಾಗಿ ಸಿಗುವ ಕಡೆ,ಭೂಮಿ ಫಲವತ್ತಾಗಿ ಇರುವ ಕಡೆ ಮನೆಯನ್ನು ಕಟ್ಟಿಕೊಳ್ಳುವರು.ಸಾಮಾನ್ಯವಾಗಿ ಬೆಟ್ಟದ ಇಳಿಜಾರು ಜಾಗದಲ್ಲಿ ಇವರ ಇಲ್ ಗಳು ಇರುತ್ತವೆ.ಆ ಇಳಿಜಾರಿನಲ್ಲಿ ಯೇ ಒಂದು ಸಮತಟ್ಟಾದ ಜಾಗ ಆಯ್ಕೆ ಮಾಡಿಕೊಂಡು ಕಂಭಗಳನ್ನು ನೆಟ್ಟು ಕಮಾನು ಜೋಡಿಸಿ ಬಿಗಿದು ಛಾವಣಿಗೆ ನೆಲ್ ಹುಲ್ಲನ್ನು ಹೊದಿಕೆಯಾಗಿ ಹಾಸಿ ನೆನೆಯದಂತೆ ಕಟ್ಟಿ ಕೊಳ್ಳುವ ಮನೆಗಳು ಪೂರ್ವಿಕರ ನೆನಪು ಮಾಡುತ್ತವೆ.ಹಿಂದಿನ ಕೌಶಲವನ್ನು ಉಳಿಸಿಕೊಂಡು ಕಟ್ಟುವ ಮನೆಗಳು ದೀರ್ಘ ಕಾಲ ಬಾಳಿಕೆ ಬರುತ್ತವೆ.ಗೋಡೆಯ ಮೇಲೆ ಸೂರ್ಯ,ಚಂದ್ರ,ಭೂ ಮಂಡಲ,ಚಿತ್ತಾರ ಇದೆ. ಗಿಡ ಮರ ಬಳ್ಳಿ,ಕಾಯಿ ಹಣ್ಣು ಚಿತ್ರಗಳು ರೇಖಾ ಚಿತ್ರದಲ್ಲಿ ಗೋಡೆಗೆ ಅಂದ ಕಾಣಿಸಿದೆ.ಬೆಟ್ಟದ ಮೇಲೆ ವಾಸ ಮಾಡುವ ಈ ಸಮುದಾಯ ಹಾಡಿ ಎಂದು ಕರೆಯುತ್ತಾರೆ.ಹಬ್ಬಗಳಲ್ಲಿ ಮದುವೆಗಳಲ್ಲಿ,ಸಂಪ್ರದಾಯ ಗಳಲ್ಲಿ ನೃತ್ಯ ಮಾಡುತ್ತಾರೆ. ಕುಡಿಯರ ದೈವ ಬನ ಗದ್ದುಗೆ ಮಾಡಿ ತ್ರಿಶೂಲ ನೆಟ್ಟು ಪೂಜೆ ಮಾಡುತ್ತಾರೆ.ಗದ್ದುಗೆ ಸುತ್ತ ಕಕ್ಕೆ,ಮುತ್ತುಗ, ಕಾಡುನೆಲ್ಲಿ,ಹಲಸು,ನೇರಳೆ,ಬೇವು ಔಷಧಿ ಯುಕ್ತ ಗಿಡ ಮರ ಬಳ್ಳಿಗಳನ್ನು ಬೆಳೆಯುತ್ತಿವೆ. ಚಹರೆಯುಳ್ಳ ಮನೆಗಳು ಜಾನಪದ ಲೋಕದಲ್ಲಿ ಗಿರಿಸಿಮೆಯಾಗಿ ನೋಡುಗರ ಆಕರ್ಷಿಸುತ್ತವೆ. ಸರಿ.
4) ಹಾಲಕ್ಕಿ ಒಕ್ಕಲಿಗರು : ಸಮಾಜದ ಎಲ್ಲ ಕುರುಹುಗಳನ್ನು ಒಳಗೊಂಡಿರುವ ಹಾಲಕ್ಕಿ ಸಮುದಾಯವು ಕುಮಟಾ, ಹೊನ್ನಾವರ, ಗೋಕರ್ಣ, ಅಂಕೋಲ, ಗಳಲ್ಲಿ ವಾಸಿಸುತ್ತಿದ್ದಾರೆ. ಇವರು ವಾಸ ಮಾಡುವ ಜಾಗವನ್ನು ‘ಕೊಪ್ಪ’ಎಂದು ಕರೆದುಕೊಳ್ಳುತ್ತಾರೆ. ಹಲವು ಕೊಪ್ಪಗಳನ್ನು ಸೀಮೆ ಎಂತಲೂ ಕರೆಯುವುದುಂಟು. ತಾರಲೇ, ಬಾರ್ಲೆ, ಕುಣಿತವನ್ನು ಹೆಣ್ಣು ಮಕ್ಕಳು ಮಾಡುತ್ತಾರೆ. ಹುಲ್ಲು ಹೊದಿಸಿದ ಮನೆಗಳಲ್ಲಿ ವಾಸ ಮಾಡುತ್ತಾರೆ. ಮನೆ ಮುಂದೆ ತುಳಸಿಕಟ್ಟೆ, ಇದ್ದು ಮುಂದೆ ಪದ್ಮಶ್ರಿ ಸುಕ್ರಿ ಬೊಮ್ಮಗೌಡ ರ ಪ್ರತಿಮೆ ಮನಸೂರೆಗೊಳ್ಳುತ್ತದೆ. ಗೋಡೆಯ ಮೇಲೆ ಗಂಡು ಹೆಣ್ಣಿನ ನೃತ್ಯಚಿತ್ರ , ತೆನೆ ಬೀಜ, ಹಾಲಕ್ಕಿಯ ಸುಗ್ಗಿಯ ಕುಣಿತ ಚಿತ್ತಾರದಲ್ಲಿ ಸೊಗಸಾಗಿ ಮೂಡಿಬಂದಿದೆ. ಸುಗ್ಗಿ ವೇಷಗಾರರು, ಸುಗ್ಗಿ ಕುಣಿತ, ಹಗರಣ ಆಚರಣೆ, ಗುಮಟೆ ಪಾಂಗ್, ಕಲಾಪ್ರದರ್ಶನ, ಫೋಟೋಗಳಿವೆ. ಭತ್ತ ಕುಟ್ಟುವ ಮಹಿಳೆಯ ಚಿತ್ರ,ಭತ್ತವನ್ನು ವಂದ್ರಿ ಹಿಡಿಯುವ ಚಿತ್ರಗಳು ಮತ್ತು ರಾಗಿ ಬೀಸುವ ಕಲ್ಲು ಆಕರ್ಷಕವಾಗಿವೆ. ಮನೆಯ ಮುಂದೆ ಗೋಣಿ ಮರ, ಆಲ, ತಾರೆ, ಮುಳ್ಳು ಗೆಣಸು, ಸಿಹಿ ಗೆಣಸು, ಲೋಳೆ ಗೆಣಸು, ಗಿಡಗಳು ಆಕರ್ಷಣೀಯವಾಗಿದೆ.
5) ಗೌಳಿಗರು : ಹಾಲು ಉತ್ಪನ್ನದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಇವರು ಪ್ರಧಾನವಾಗಿ ಪೂರ್ವದಿಂದ ಲೂ ಎಮ್ಮೆ ಸಾಕುತ್ತಾರೆ.ಪಶು ಸಂಗೋಪನೆಯನ್ನೇ ನಂಬಿ ಬದುಕುತ್ತಿರುವ ಈ ಸಮುದಾಯ ದಟ್ಟವಾದ ಸಂಸ್ಕೃತಿ ಪಡೆದಿರುವ ಸಮುದಾಯ.ತನ್ನಭಾಷೆ, ವೃತ್ತಿಯಿಂದಲೇ ಇಂದಿಗೂ ವಿಶಿಷ್ಟತೆಯನ್ನು ಕಾಪಾಡಿಕೊಂಡು ಬಂದಿವೆ. ಒಂದು ಶತಮಾನಕ್ಕೂ ಮುಂಚೆ ಗೋವಾ ಮತ್ತು ಮಹಾರಾಷ್ಟ್ರ ಗಳಿಂದ ವಲಸೆ ಬಂದು ನೆಲೆ ನಿಂತಿದ್ದಾರೆ.ವಾಡೆಯಂತೆ ಮನೆ ಮಾಡಿಕೊಂಡು ಹಾಲು ಮಾರುತ್ತಾ ಹಣ ಸಂಪಾದಿಸುವ ಮಾರ್ಗವನ್ನು ಕಂಡು ಕೊಂಡಿದ್ದಾರೆ. ಗೋಡೆಯ ಮೇಲೆ ಕಾಡಿನ ಮರ,ಸೂರ್ಯ ಚಂದ್ರ,ನಕ್ಷತ್ರ, ಹಸೆ ಚಿತ್ತಾರ,ಎದ್ದು ಕಾಣುತ್ತವೆ.ಜೊತೆಗೆ ಗೌಳಿಗರ ಮಹಿಳೆ,ಗೌಳಿ ಸಂಸಾರ, ಹೋಳಿ ಹಬ್ಬದ ಕುಣಿತ ಫೋಟೋಗಳು ಆ ಸಮುದಾಯದ ಚಹರೆಯಾಗಿ ಕಂಗೊಳಿಸುತ್ತವೆ.ಮನೆಯ ಮುಂದೆ ಮಜ್ಜಿಗೆ ಹಾಲು ಮೊಸರು ಕಡೆಯುತ್ತಿರುವ ಮಹಿಳೆಯ ಪ್ರತಿಮೆಯು ಒಂದು ಕಾಲದ ಹಳ್ಳಿಯ ಪ್ರತಿ ಮನೆಯ ನೆನಪನ್ನು ತರಿಸುತ್ತದೆ.ಹೀಗೆ ಬುಡಕಟ್ಟು ಹಾಡಿಗಳನ್ನು ನೋಡುತ್ತಾ ಅಧ್ಯಯನ ಮಾಡುತ್ತಾ ಜಾನಪದ ಲೋಕದೊಳಗೆ ಕಲೆ ಮತ್ತು ಸಂಸ್ಕೃತಿ ಯೊಂದಿಗಿನ ಸಂಬಂಧ ವನ್ನು ತಿಳಿಯಲು ಈ ಬುಡಕಟ್ಟು ಹಾಡಿಗಳನ್ನು ಕಣ್ತುಂಬಿಕೊಳ್ಳಬೇಕು ಅನ್ನುವ ಹಾಗೆ ನಿರ್ಮಿಸಿರುವುದು ಮೆಚ್ಚುಗೆಯಾದುದು.
ಒಟ್ಟಾರೆ ಜಾನಪದ ಲೋಕದೊಳಗೆ ಕಟ್ಟಿರುವ ಈ ಹಟ್ಟಿಗಳ ಹಿಂದೆ ವಿಸ್ತಾರವಾದ ಬುಡಕಟ್ಟು ಕಥನವೇ ತೆರೆದುಕೊಳ್ಳುತ್ತದೆ. ನಾಡೋಜ ಎಚ್ ಎಲ್ ನಾಗೇಗೌಡರ ಬಹು ವರ್ಷಗಳ ಕನಸು ನನಸಾಗಿರುವುದಕ್ಕೆ ಹೆಮ್ಮೆಪಡಬೇಕು. ಇದರ ಮೂಲಕ ಬುಡಕಟ್ಟು ಸಮುದಾಯ ಮತ್ತು ಕಲೆಗಳು ,ಲೋಕದಲ್ಲಿ ಶೈಕ್ಷಣಿಕ ವಾಗಿಯೂ ಜಾನಪದ ಡಿಪ್ಲೋಮಾ ತರಗತಿಗಳು, ಮತ್ತು ಸಂಶೋಧನೆಗಳು ನಡೆಯುತ್ತಾ ಬಂದಿವೆ.ಸಾಂಸ್ಕೃತಿಕವಾಗಿಯೂ ಈಗ ತುಂಬು ಆಕರ್ಷಣೆ ಯಿಂದ ನಿತ್ಯ ಪ್ರವಾಸಿಗರನ್ನು, ಶಾಲಾ ಕಾಲೇಜು ಮಕ್ಕಳನ್ನು ಹೆಚ್ಚು ಹೆಚ್ಚು..ತನ್ನ ಕಡೆ ಸೆಳೆಯುತ್ತಿದೆ. ಮುಖ್ಯ ಆಕರ್ಷಣೆ ಯಾಗಿ ಪ್ರವಾಸಿಗರನ್ನು ಸೆಳೆದವು. ಹೊಸದಾಗಿ ಬಂದವರು, ಬುಡಕಟ್ಟು ಲೋಕ ಪರಿಚಯವೇ ಇಲ್ಲದ ಜನರಿಗೆ ಕುತೂಹಲ ನೋಡಉತ್ತಿದ್ದಾರೆ.. ಬಂದವರೆಲ್ಲ ಬುಡಕಟ್ಟು ಹಟ್ಟಿಗಳ ಕಡೆ ದಾಪು ಗಾಲು ಇಡುತ್ತಿದ್ದಾರೆ, ಅವುಗಳನ್ನು ನೋಡುವುದೇ ಒಂದು ಚಂದ. ಆ ಹಟ್ಟಿಗಳು ಪ್ರಕೃತಿ ಯ ಜೊತೆಗೆ ಹೊಂದಿಕೊಂಡು ನಿಸರ್ಗದಲ್ಲಿ ಬೆರೆಯುವುದನ್ನು ಕಾಣಬಹುದಾಗಿದೆ.
-ಡಾ. ಶಿವರಾಜು ಬ್ಯಾಡರಹಳ್ಳಿ
—–