ದೇಶದಲ್ಲಿರುವ ಎಲ್ಲಾ ಸಾಮಾಜಿಕ ಕಾಯಿಲೆಗಳಿಗೆ ಸಂವಿಧಾನವೇ ಔಷಧಿ -ಪತ್ರಕರ್ತ ಕೆ. ದೀಪಕ್

ಮೈಸೂರು, ಫೆ.1: ಭಾರತದಲ್ಲಿದ್ದ ಬಹುತೇಕ ಸಾಮಾಜಿಕ ಕಾಯಿಲೆಗಳಿಗೆ ಸಂವಿಧಾನವೆಂಬ ಒಂದೇ ಔಷಧಿಯನ್ನು ಕೊಟ್ಟವರು ಬಾಬಾಸಾಹೇಬ ಡಾ.ಬಿ ಆರ್ ಅಂಬೇಡ್ಕರ್. ಎಂದು ಮೈಸೂರು ಜಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.‌ದೀಪಕ್ ಅವರು ತಿಳಿಸಿದರು.                          ಪ್ರೊ.ಬಿ.ಪಿ ಮಹೇಶ್ ಚಂದ್ರ ಗುರು ಅವರ 68ನೇ ಜನ್ಮದಿನ ನೆನಪಿನಾರ್ಥವಾಗಿ ಗುರುನಮನ ಸಮಿತಿ ಹಾಗೂ ಮೈಸೂರು ವಿವಿ ಸಂಶೋಧಕರ ಸಂಘ ಇವರ ಸಹಯೋಗದಲ್ಲಿ ‘ಭಾರತೀಯ ಸಂವಿಧಾನ ವಿಶಿಷ್ಟತೆ ಮತ್ತು ಮುಂದಿನ ಸವಾಲುಗಳ’ ಕುರಿತು ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.        ‌            ಪ್ರಸ್ತುತ ಸಂವಿಧಾನಕ್ಕೆ ಸನಾತಿಯರಿಂದ ಅಪಾಯ ಕಾದಿದ್ದು ಅದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲಾ ಪ್ರಜಾಪ್ರಭುತ್ವವಾದಿಗಳ ಮೇಲೆ ಇದೆ ಎಂದರು.        ಡಾ.ಬಿ.ಆರ್ ಅಂಬೇಡ್ಕರ್ ಅವರ ಹೋರಾಟದ ಬದುಕನ್ನು ಧಾರವಾಹಿಗಳ ಮೂಲಕ ಸಾಮಾನ್ಯರಿಗೆ ತಲುಪಿಸಲಾಗುತ್ತಿದೆ ಆದರೆ ಸಂವಿಧಾನ ಪ್ರತಿ ಮನೆಗೂ ತಲುಪಬೇಕು ಎಂದು ತಿಳಿಸಿದರು.

ಡಾ.ಬಿ.ಆರ್ ಅಂಬೇಡ್ಕರ್ ಕೇವಲ ಬೇರೆ ದೇಶಗಳ ಸಂವಿಧಾನಗಳನ್ನು ಮಾತ್ರ ಓದಿಕೊಂಡು ಸಂವಿಧಾನ ರಚನೆ ಮಾಡಿಲ್ಲ ಜೊತೆಗೆ ಭಾರತದ ಎಲ್ಲಾ ವರ್ಗದ ಜನರ ಮನಸ್ಥಿತಿ ಅರಿತು ಸಂವಿಧಾನ ರಚಿಸಿದ್ದಾರೆ ಎಂದು ಹೇಳಿದರು.

ಪ್ರೊ. ಮಹೇಶ್ ಚಂದ್ರ ಗುರು ಸಂವಿಧಾನ ಕುರಿತು ಜನಜಾಗೃತಿ ಮೂಡಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಸಮಾಜದಲ್ಲಿ ಮನುವಾದಿಗಳಿಂದ ಸಂವಿಧಾನ ವಿರುದ್ಧ ಕೂಗು ಎದ್ದಾಗ ಅವರ ವಿರುದ್ಧ ಪ್ರೊ.ಗುರು ಗಟ್ಟಿದ್ವನಿ ಎತ್ತುತ್ತಿದ್ದರು ಎಂದು ಸ್ಮರಿಸಿದರು. ಭಾರತೀಯ ಮಾಧ್ಯಮಗಳು ಸಂವಿಧಾನಕ್ಕೆ ಗಂಡಾಂತರವಿರುವ ಈ ಸಂದರ್ಭದಲ್ಲಿ ಆ ಪ್ರಸ್ತುತ ವಿಚಾರಗಳನ್ನು ಸಮಾಜದಲ್ಲಿ ಚರ್ಚಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ದಿಲೀಪ್ ನರಸಯ್ಯ. ಎಂ ಅವರು ಅಭಿವೃದ್ಧಿ ಶೀಲ ರಾಷ್ಟ್ರವಾಗಿರುವ ಅಮೆರಿಕದಲ್ಲಿ ಮಹಿಳೆಯರು ಮತದಾನ ಹಕ್ಕಿಗಾಗಿ ಎರಡು ಶತಮಾನಗಳು ಹೋರಾಟ ಮಾಡಿದ್ದಾರೆ. ಆದರೆ ಡಾ. ಅಂಬೇಡ್ಕರ್ ಸಾರ್ವತ್ರಿಕ ವಯಸ್ಕ ಮತದಾನ ಹಕ್ಕು ನೀಡುವ ಮೂಲಕ ವಿಶಿಷ್ಟ ಸಂವಿಧಾನವನ್ನು ರಚಿಸಿದ್ದಾರೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವ ಮತ್ತು ಆಶಯಗಳನ್ನು ತಿಳಿಸಲು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಭವಿಷ್ಯದಲ್ಲಿ ಪ್ರೊ. ಗುರುರವರ ಸ್ಮರಣಾರ್ಥವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಆಯೋಜಿಸಲು ಗುರುನಮನ ಸಮಿತಿಯು ಯೋಜಿಸಿದೆ ಎಂದು ತಿಳಿಸಿದರು.


ಮುಖ್ಯ ಅತಿಥಿ ಜೈನಳ್ಳಿ ಸತ್ಯನಾರಾಯಣ ಗೌಡ ಅವರು ಮಾತನಾಡಿ ಜ್ಞಾನ ಬುತ್ತಿ ನಡೆಸುವ ಸ್ಪರ್ಧಾತ್ಮಕ ತರಬೇತಿಗಳಿಗೆ ಬರುತ್ತಿದ್ದ ಗ್ರಾಮೀಣ ಸ್ಪರ್ಧಾರ್ಥಿಗಳನ್ನು ಅಧಿಕಾರಿಗಳನ್ನಾಗಿ ಮಾಡಲು ಪ್ರೊ.ಗುರು ಉತ್ತೇಜಿಸುತ್ತಿದ್ದರು. ಇಂದು ಅವರಿಲ್ಲದೆ ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟವಾಗಿದೆ ಎಂದು ತಿಳಿಸಿದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾಗಿ ಬಹುಮಾನಗಳಿಸಿದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪ್ರತಿಮಾ ಪ್ರಥಮ ಬಹುಮಾನ (4000 ರೂ), ಜೆಎಸ್ಎಸ್ ವಿಜ್ಞಾನ ಕಲಾ ಹಾಗೂ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿ ನಿತಿನ್ ದ್ವಿತೀಯ ಬಹುಮಾನ (3000 ರೂ) ಹಾಗೂ ತೃತೀಯ ಬಹುಮಾನ(2000ರೂ)ವನ್ನು ಮಹಾರಾಣಿ ಕಲಾ ಕಾಲೇಜಿನ ವಿದ್ಯಾರ್ಥಿನಿ ಸುಜನ ಇವರುಗಳಿಗೆ ನಗದು ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಜಯಶ್ರೀ ಜಗದೀಶ್ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಪ್ರೊ.ಮಹೇಶ್ ಚಂದ್ರಗುರು ಅವರ ಧರ್ಮಪತ್ನಿ ಡಾ. ಸಿ ಹೇಮಾವತಿ, ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ಕಾರ್ಯಕ್ರಮ ಸಂಯೋಜಕ ಸಂಜಯ್ ಬಿಸಿ ಹಾಗೂ ಇನ್ನಿತರರು ಭಾಗವಹಿಸಿದ್ದರು.