ನೀನಲ್ಲವೇ ಸೂಫಿ
ಕವಿದ ಕತ್ತಲ ಕುರುಡು ಹಾದಿಯಲಿ
ದಾರಿ ತೋರುವ ಬೆಳಕ ಮನದ ಮೋಹಿ
ನೀನಲ್ಲವೇ ಸೂಫಿ
ಕೆಂಡವ ಮುಚ್ಚಿದ ಬೂದಿಯ ಸರಿಸಿ
ಸತ್ಯವ ಸಾಕ್ಷಾತ್ಕರಿಸುವ ದೇಹಿ
ನೀನಲ್ಲವೇ ಸೂಫಿ
ಬದುಕು ಹಿಂಡುವ ನೋವನು
ನಗೆಯ ಹಾಡಾಗಿಸುವ ರಾಹಿ
ನೀನಲ್ಲವೇ ಸೂಫಿ
ಅಜ್ಞಾನದ ಮಣ್ಣಿನ ಗರ್ಭದಿ
ಸುಜ್ಞಾನದ ಬೀಜ ಮೂಡಿಸುವ ಸಾಹಿ
ನೀನಲ್ಲವೇ ಸೂಫಿ
ಒಡಲ ದ್ವೇಷದ ಕಿಚ್ಚು ಆರಿಸಿ
ಹೃದಯದಿ ಪ್ರೇಮ ತುಂಬುವ ಸಹಿ
ನೀನಲ್ಲವೇ ಸೂಫಿ
ಕಡಲ ಸುಂದರ ಇಳಿ ಸಂಜೆಯಲಿ
ಬೇಸರದ ನಾವೆ ತೇಲಿ ಬಿಡುವ ಮಾಹಿ
ನೀನಲ್ಲವೇ ಸೂಫಿ
ಕನಸ ಬೀದಿಯ ಅಲೆಮಾರಿ ಫಕೀರ
ಉನ್ನತ ಬದುಕಿನ ಆರೋಹಿ
ನೀನಲ್ಲವೇ ಸೂಫಿ
ಲೋಕದ ಕಾಯವನ್ನು ಮರೆತು
ಪರಮಾತ್ಮನಲ್ಲಿ ಕರಗುವ ರೂಹಿ
ನೀನಲ್ಲವೇ ಸೂಫಿ
◼️ಚಿತ್ರ ಮತ್ತು ಕವಿತೆ: ಜಬೀವುಲ್ಲಾ ಎಮ್. ಅಸದ್, ಬೆಂಗಳೂರು
- —–