ಬೆಂಗಳೂರು, ಫೆ.4: ಮಹಾನಗರದ ಹೆಚ್.ಕೆ.ಬಿ.ಕೆ. ಇಂಜಿನಿಯರಿಂಗ್ ಕಾಲೇಜಿನ ಆಂತರಿಕ ಭರವಸೆ ಕೋಶ (ಐಕ್ಯೂಎಸಿ) ವಿಭಾಗದ ಸಹಯೋಗದಲ್ಲಿ ಐದು ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ ಮಂಗಳವಾರ ಆರಂಭವಾಯಿತು.
ಮಹಾನಗರದ ಹೆಚ್.ಕೆ.ಬಿ.ಕೆ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಹಮ್ಮದ್ ರಿಯಾಝ್ ಅಹ್ಮದ್ ಅವರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,
ಸಂಸ್ಥೆಯ ಪ್ರತಿಯೊಂದು ಜವಾಬ್ದಾರಿಯನ್ನೂ ಪ್ರತಿಯೊಬ್ಬರೂ ನಿರ್ವಹಿಸುವ ಕೌಶಲ ರೂಢಿಸಿಕೊಂಡರೆ ಮಾತ್ರ ಸಂಸ್ಥೆಯು ಗುಣಾತ್ಮಕ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವ್ಯಕ್ತಿ ಜೀವನದಲ್ಲಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಾಗ ಎಲ್ಲ ಬಗೆಯ ಹೊಣೆಗಾರಿಕೆ ಹೊತ್ತುಕೊಳ್ಳಲು ಸಿದ್ಧರಿರಬೇಕು. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಗಳು ಸಹಜ. ಹೀಗಾಗಿ ವೃತ್ತಿಜೀವನದಲ್ಲಿ ಯಶಸ್ವಿಯಾಗಬೇಕಾದರೆ ಎಲ್ಲ ರೀತಿಯ ಕೌಶಲಗಳನ್ನು ಕಲಿತುಕೊಳ್ಳುವುದು ಅವಶ್ಯವಿದೆ.
ಐಕ್ಯೂಎಸಿ ವಿಭಾಗದ ಜೊತೆಗೆ ಎಲ್ಲ ಅಧ್ಯಾಪಕರು ಸಹಕರಿಸಬೇಕು. ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ಎಲ್ಲ ಅಧ್ಯಾಪಕರು ಸಂಸ್ಥೆಯ ಬಲವರ್ಧನೆಗೆ ಶ್ರಮಿಸಬೇಕು ಎಂದು ಪ್ರಾಂಶುಪಾಲರು ಕರೆ ನೀಡಿದರು.
ಫೆ.4 ರಿಂದ 8 ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅಧ್ಯಾಪಕರು ಪಾಠಯೋಜನೆ, ಬೋಧನ ವಿಧಾನ, ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಣೆ, ಮೌಲ್ಯಮಾಪನ ಮುಂತಾದ ಕಾರ್ಯ ಚಟುವಟಿಕೆಗಳ ಕುರಿತು ತರಬೇತಿ ನೀಡಲಾಗುವುದು ಎಂದು ಸಂಯೋಜಕರು ತಿಳಿಸಿದರು.
ಕಾಲೇಜಿನ ವಿವಿಧ ವಿಭಾಗಳ ಮುಖ್ಯಸ್ಥರಾದ
ಡಾ. ಸ್ಮೀತಾ ಕುರೇನ್, ಡಾ. ಸಲೀಂ ಶರೀಫ್, ಡಾ. ಮಾಝ್ ಅಹ್ಮದ್, ಪ್ರೊ. ಸುಮಯಾ ಬಾನು ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಪಾಲ್ಗೊಂಡಿದ್ದರು.
ಐಕ್ಯೂಎಸಿ ಸಂಯೋಜಕರಾದ ಡಾ.ಝಹಿರಾ ತಬ್ಸುಮ್ ಸ್ವಾಗತಿಸಿದರು. ಡಾ. ನದೀಮ್ ಪಾಷಾ ವಂದಿಸಿದರು. ಪ್ರೊ. ಪ್ರಿಯಾಂಕ ನಿರೂಪಿಸಿದರು.