ಅವರೆಕಾಳು ಸಾರು V/s ಕವಿತೆ…
ಲಯ ತಪ್ಪಿ ಮೂಲೆಯಲ್ಲಿ
ಕುಳಿತ ಕವಿತೆಯ
ಮುಂಗೈ ಹಿಡಿದು ಅವಳು ಅಡುಗೆ-
ಮನೆಗೆ ಕರೆದೊಯ್ದಳು.
ಹೊಲದಲ್ಲಿ ಬಿಡಿಸಿ ತಂದು
ಆಗತಾನೆ ಸುಲಿದ
ಸೊಗಡಿನ ಅವರೆಕಾಳಿನ ಸಾರು
ಕೊತಕೊತ ಕುದಿಯುತ್ತಿತ್ತು.
ಅವಳ ಮೂಗು ಅವಳಿಗೆ
ಏನು ಹೇಳಿತೋ;
ಅವರೆಕಾಳು, ಶುಂಠಿ ಬೆಳ್ಳುಳ್ಳಿ
ಜೊತೆ ಜಗಳ ಕಾಯುತ್ತಿವೆ
ಎಂದು ಗೊಣಗಿದಳು,
ಸ್ವಲ್ಪ ಧಿಮಾಕು
ಈ ಶುಂಠಿ ಮತ್ತು ಬೆಳ್ಳುಳ್ಳಿಗೆ,
ದಬ್ಭಾಳಿಕೆ ಅವುಗಳದೇ
ಎಂದು, ಕವಿತೆಗೆ ಹೇಳಿ,
ಹಸಿ ತೆಂಗಿನ-
ಕಾಯಿ ತುರಿ, ಕೊತ್ತುಂಬರಿ ಸೊಪ್ಪು
ರುಬ್ಬಿಹಾಕಿ, ಒಗ್ಗರಣೆ ಕೊಟ್ಟು
ಕುದಿ ಹೆಚ್ಚಿಸಿದಳು
ಕುದಿಯುವ
ಒಂಚೂರು ಸಾರನ್ನು ಸೌಟಲ್ಲಿ ತೆಗೆದು
ಉಫ್ ಎಂದು ಊಬಿ
ಅಂಗೈಯಲ್ಲಿ ಹಾಕಿಕೊಂಡು,
ನೆಕ್ಕಿ ನೋಡಿ,
ಲೊಚ್ ಅಂತ ಲೊಟ್ಟೆ ಹೊಡೆದು
ಕಣ್ಣರಳಿಸಿದಳು,
ಕವಿತೆ
ತನ್ನ ಲಯ ಕಂಡುಕೊಂಡಿತು…
-ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು