ಇಂದು 75 ವರ್ಷಗಳನ್ನು ಪೂರೈಸಿದ…. ಅಣ್ಣ(ಅಪ್ಪ)ನ ಜೊತೆ ಒಂದಿದಿಷ್ಟು ಪ್ರೀತಿಯ ಹೊತ್ತು… ಈ ಪದಗಳ ಕಾಣಿಕೆ ಇತ್ತು…. ಅಪ್ಪಿ ನಿಂತಾಗ…. ಅಪ್ಪನ ಹುಟ್ಟು ಹಬ್ಬವಾದ ಸಂಭ್ರಮ….. ಮೈ ಮನಸಿಗೆಲ್ಲಾ!
ಅಪ್ಪ….
ಬದುಕಿನ ಆಗುಹೋಗುಗಳ ಮಧ್ಯೆ
ಸ್ಥಿರವಾಗಿ ನನ್ನೊಳಗೆ ಬೇರೂರಿ
ನನಗೆ ಸಮಯಕ್ಕಾಗುವ
ವಿವೇಚನೆ ನೀನು ….
ಇನ್ನು ಸಾಕಾಯಿತು ಎಂದು ಕೈಚೆಲ್ಲಿ
ಬಿಡಬೇಕೆನ್ನುವಾಗ ಹುರಿದುಂಬಿಸಿ
ಮತ್ತೆ ನನ್ನ ಮುನ್ನಡೆಸುವ
ಆತ್ಮವಿಶ್ವಾಸ ನೀನು…
ಅವರಿವರು ಅಕ್ಕರೆಯಲ್ಲಿ ಮಾತಾಗಿ
ಪ್ರೋತ್ಸಾಹದಲ್ಲಿ ಬೆನ್ನು ತಟ್ಟಿ , ನನ್ನ
ಶ್ಲಾಗಿಸುವಾಗ , ಮೂಡುವ
ಕೃತಜ್ಞತಾಭಾವ ನೀನು…
ನಡೆಯುತ್ತಿರುವುದು ಸರಿಯಿಲ್ಲವೆನಿಸಿ
ಮತ್ತಾರದೋ ಕಣ್ಣಲ್ಲಿ ಕಣ್ಣಿಟ್ಟು
ವಾದಿಸುವಾಗ ನನ್ನೊಳಗಿರುವ
ಸತ್ಸಂಸ್ಕಾರ ನೀನು…..
ಬದುಕಿನಲ್ಲಿ ಬೇಕಾದವರಿಗೆ ನೆರವಾಗಿ
ಏನನ್ನೂ ಅಪೇಕ್ಷಿಸದೆ, ಪ್ರೀತಿ ಒಂದನ್ನೇ
ಧಾರೆಯೆರೆಯಲು ಪ್ರೇರೇಪಿಸಿದ
ಆಪ್ತಜೀವ ನೀನು….
ಎಲ್ಲೇ ಹೋದರೂ , ಏನೇ ಆದರೂ
ಎಲ್ಲೆ ಮೀರಿ ನಡೆಯದಂತೆ, ಸದಾ
ನನ್ನೊಳಗೆ ಜಾಗೃತವಾಗಿರುವ
ಸಾಕ್ಷಿ ಪ್ರಜ್ಞೆ ನೀನು …
ಇಂದಿಗೂ ಜಗದೆಲ್ಲ ಗೊಡವೆಯ ಮರೆತು
ನನಗಾಗಿ ಮಿಡಿಯುವ ಜೀವವೊಂದಿದೆ
ಎಂದು ನನ್ನನ್ನು ಮಲಗಿಸುವ
ನೆಮ್ಮದಿ ನೀನು….
-ರೂಪ ಗುರುರಾಜ, ಬೆಂಗಳೂರು
—–