ಅನುದಿನ‌ ಕವನ-೧೫೦೦, ಯುವ ಕವಿ: ದಾದಾಪೀರ್ ಜೈಮನ್, ಬೆಂಗಳೂರು, ಚಿತ್ರ: ಮಲ್ಲಿಕಾರ್ಜನ ಗೌಡ, ದಾವಣಗೆರೆ

ಧಡಲ್ ಧಡಲ್ ಧಡಲ್ ಧಡಲ್
ಧಡಲ್ ಧಡಲ್ ಧಡಲ್ ಧಡಲ್
ಖೂ.. ಎಂದು ಕೂಗಿಕೊಂಡು
ದೌಡಾಯಿಸುವ ರೈಲಿಗೆ ಬೆನ್ನು ಕೊಟ್ಟು ನಡೆವವನ
ತಲೆಯೊಳಗೆ

ಹೊತ್ತು
ಏನು ಸುಳಿದಿತ್ತು?
ಈ ಬದುಕು ಭವಿಷ್ಯದ್ದು ಎನ್ನುವುದು
ಉಳಿದವರ ಉಯಿಲು
ಬದುಕುವವರದ್ದು
ಆ ಹೊತ್ತಿನ ದರ್ದು
ಆ ಹೊತ್ತಲ್ಲಿ ಬದುಕಿನ ಅದ್ಯಾವ ಲಯವ ಹುಡುಕಿದ್ದು
ಮತ್ಯಾವ ಲಯದೊಳಗೆ ವಿಲೀನವಾಗಿದ್ದು?
ಬಯಸಿಯೋ ಬಯಸದೆಯೋ
ಪ್ರತಿರೋಧಕ್ಕೋ ಹಿಂಸೆಗೊ
ಯಾವುದನ್ನು ಯಾರಿಗೆ ಏನನ್ನು ಹೇಗೆ ತಿಳಿಸಲು
ಸುಮ್ಮನೆ ನಡೆಯುತ್ತಾ ಸಾಗಿದ್ದು
ಬೆನ್ನ ಹಿಂದಿನ ಸದ್ದಿಗೆ
ಧಡಲ್ ಧಡಲ್ ದಢಲ್ ಧಡಲ್
ಧಡಲ್ ಧಡಲ್ ಧಡಲ್ ಧಡಲ್
ಮತ್ಯಾವುದಕ್ಕೆ ಮುಖ ಮಾಡಿ..

ಧೋ ಎಂದು ಸುರಿವ ಮಳೆಗೆ
ಕಣ್ಣು ಕೊಟ್ಟು
ಅಂಗಾತ ಮಲಗಿ
ಮಿಂಚು ಗುಡುಗುಗಳಿಗೆ ಎದೆ ಕೊಟ್ಟು
ಮಲಗಿದ
ಆ ಕವಿಯ ಎದೆಯೊಳಗೆ
ಅದ್ಯಾವ ಅನಾಥ ಕವಿತೆ
ಭಾಷೆಯ ಭಾವದ ರೂಪು ಪಡೆಯುವ
ದರ್ದಿಲ್ಲದೆ
ಕಣ್ಣೀರಾಗಿ
ಅನಾಥವಾಗಿ ಕರಗಿ ಹೋಗಿರಬಹುದು
ಕೊನೆಯ ಕವಿತೆಯ ಬರೆಯಲಾಗದೆ
ಕವಿ ಕೈಚೆಲ್ಲಿ ಹೋಗಿರಬಹದು..

ಹುಚ್ಚು ಹುಡುಗರು ನೀವು
ನಿಜವಾದ ಕವಿಯನ್ನು ಅರ್ಥ ಮಾಡಿಕೊಳ್ಳಲಾರದು ಜಗತ್ತು
ಕವಿತೆಯ ಹಾಗೆ
ಅವನು ಅರ್ಥವನ್ನು ಮೀರುತ್ತಾ ಮೀರುತ್ತಾ
ಕಾಲದ ಗುಂಗು ಹಿಡಿಯಲು
ಅದರ ಚುಂಗು ಹಿಡಿದು
ಜೂಜಿಗಿಳಿಯುತ್ತಾನೆ
ಅರ್ಥದ ಹಿಂದೆ ಬಿದ್ದ ಜಗತ್ತು
ತಕ್ಕಡಿಯ ಮುಂದೆ ಹಿಡಿದು ಆಕಳಿಸುತ್ತದೆ
ಬಿಕರಿಗೆ ಬಾರದ ಕವಿತೆಯ ಮುಂದೆ
ನಿದ್ದೆ ಹೋಗುತ್ತದೆ
ಜಗಕ್ಕೆ ಊಹೆಯಲ್ಲಿ ಲೆಕ್ಕ ಕಟ್ಟಿದ್ದೆ ನೆನಪು

ಆದರೂ
ಹುಡುಗರಾ
ಇನ್ನೊಂದಿಷ್ಟು ದಿನ ಬದುಕಬೇಕಿತ್ತು ನೀವು
ನೋಡಿ
ಇನ್ನೊಬ್ಬ ಕವಿ ನಿಮ್ಮನ್ನು ಅರ್ಥ ಮಾಡಿಕೊಳ್ಳುವ

ಪ್ರಯತ್ನವನ್ನು ನೋಡಿ ನೀವು
ಗೊಳ್ಳೆಂದು ನಕ್ಕು ಆಡಿಕೊಳ್ಳಬಹುದಿತ್ತು!!

– ದಾದಾಪೀರ್ ಜೈಮನ್, ಬೆಂಗಳೂರು
——