ಅನುದಿನ ಕವನ-೧೫೦೩, ಹಿರಿಯ ಕವಯಿತ್ರಿ: ಡಾ.‌ಹೇಮ ಪಟ್ಟಣಶೆಟ್ಟಿ, ಧಾರವಾಡ, ಕವನದ ಶೀರ್ಷಿಕೆ: ಬೆಳದಿಂಗಳು

ಫೆ. 11 ಹಿರಿಯ ಕವಯಿತ್ರಿ ಡಾ. ಹೇಮಾ‌ ಪಟ್ಟಣಶೆಟ್ಟಿ ಅವರ ಜನುಮದಿನ. ಈ ಹಿನ್ನಲೆಯಲ್ಲಿ ಇವರ ಬೆಳದಿಂಗಳು ಕವಿತೆಯನ್ನು ಪ್ರಕಟಿಸುವ ಮೂಲಕ ಕರ್ನಾಟಕ‌ ಕಹಳೆ ಡಾಟ್ ಕಾಮ್ ಸಂತಸ ಪಡುತ್ತದೆ ಜತೆಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದೆ.
(ಸಂಪಾದಕರು)

ಬೆಳದಿಂಗಳು

ಈಗಷ್ಟೇ ಅಮ್ಮೀ ಕುಡಿದು
ತುಟಿ ತುಂಬಾ ಹಾಲುನೊರೆ ಸವರಿಕೊಂಡು
ಪಿಸುನಗುವ ಮಗುವಂತೆ ಈ ಬೆಳದಿಂಗಳು
ಗಂಡನುಜ್ವಲಿಸಿ ಕೊಟ್ಟ ಪ್ರೀತಿ ಅಗ್ಗಿಷ್ಟಿಕೆಯ
ಬೆಳಕು ಬೆಳದಿಂಗಳಲ್ಲಿ
ಸಿಡಿಸಿಡಿದು ಬರುವ ಕಿಡಿಯ ಚಿತ್ರಗಳಂತೆ
ಬಾನಿನಲ್ಲಿ ಹರಡಿರುವ ಚುಕ್ಕೆಗಳು
ಮುಗಿಸಿ ರಾತ್ರಿಯ ಊಟ
ತೊಳೆದಿಟ್ಟು ಪಾತ್ರೆ ಪಗಡಗಳ
ಹಾಸಿಗೆಯ ಸರಿಪಡಿಸುವಾಗ
ತಟ್ಟನೆ ನೆನಪಾದ ಹೂಟಕೂಟಗಳು
ಹಣೆ ಗಲ್ಲ ಎದೆ ಮೇಲೆ ಬೆವರು ಹನಿಯಾದಂತೆ
ಆಕಾಶದಲ್ಲಿ ಚದುರಿ ಮೆಲುನಗುವ ಮೋಡಗಳು
ನಿಚ್ಚಳದ ನಿದ್ದೆಯಂಗಳದಲ್ಲಿ
ಮಗ್ಗುಲವ ತಾನೇ ಹೊರಳಿಸಿದ ಅಬ್ಬರಕೆ
ನಿಬ್ಬೆರಗಾಗಿ ನನ್ನ ಕಂದನ ಕಣ್ಣು
ಒಂದೇ ಸಮ ಪಿಳಿಪಿಳಿಗುಟ್ಟಿದಂತೆ ತಂಗಾಳಿ
ನನ್ನವನ ಕಣ್ಣ ಪಕಳೆಗಳ ಅಟ್ಟಾಲೆ ಏರಿ
ಹುಬ್ಬಿನಂದುಗೆ ಕಿಲಕಿಲನೆ ಬಾರಿಸುವ
ಅತ್ತೊಮ್ಮೆ ಇತ್ತೊಮ್ಮೆ ತೊನೆದು ಸೂಸುತ್ತಿರುವ
ಎಳೆಎಳೆಯ ತಿಳಿಬಾಳೆ ಎಲೆಗಳು
ತೆಳುವಾದ ಕಿಬ್ಬೊಟ್ಟೆ ನೀಲಿ ಆಕಾಶ
ಸ್ನಿಗ್ಧ ನಗೆ ಮುಗ್ಧ ಹಾಸಗಳು
ಅಲ್ಲಲ್ಲಿ ಕುಕಿಲುವ ಹಕ್ಕಿಗಳು
ನನ್ನ ಕೋಣೆಯನ್ನು ಸಿಂಗಾರಗೊಳಿಸಿರುವ
ನಿಶ್ಚಿಂತೆ ನಲಿವುಗಳು
ಈ ನಿಸರ್ಗದ ತುಂಬಾ ಸುಳಿವ ಉಲಿವುಗಳು
ನಾ ಪ್ರಕೃತಿ
ನನ್ನ ಮಗ್ಗುಲಲ್ಲಿ ಚೆಲುವ ಚಂದ್ರಾಮ
ಕೂಸಿನ ತುಟಿಗೆ ಅಂಟಿದೆ
ನಮ್ಮ ನಂಟಿನ ಅಂಟು ಬೆಳದಿಂಗಳು.


-ಹೇಮಾ ಪಟ್ಟಣಶೆಟ್ಟಿ, ಧಾರವಾಡ
—–