ಅಪ್ಪ ಅವನೇ ನನ್ನಪ್ಪ
ಅರಿವನೆರೆದ
ಅರಿವಾಗುವವರೆಗೂ ಪೊರೆದ
ಸದ್ದಿಲ್ಲದೆ ದೂರಕೆ ಸರಿದು ದಿಟ್ಟಿಸಿದ್ದ
ಅವನೇ ಅಪ್ಪ, ನನ್ನಪ್ಪ..
ಬಿದ್ದಾಗ ಬೆರಳ ನೀಡಿ ಏಳೆಂದ
ಎದ್ದಾಗ ಅಪ್ಪಿ ಭೇಷ್ ಎಂದ
ಹೆಜ್ಜೆಯೊಂದ ಮುನ್ನಡೆಸಿ
ಬೆನ್ನ ಹಿಂದೆ ನಿಂತಿದ್ದ ಅಪ್ಪ, ಅವನೇ ನನ್ನಪ್ಪ
ಗುರಿಯ ತೋರಿಸಿ ಹೊರಡೆಂದ
ಹೊರಟಾಗ ಜೊತೆಯಾದ
ಸುತ್ತ ಬೇಲಿಯ ಬಿಚ್ಚಿಸಿ ಬಯಲಿನೆಡೆ ನೂಕಿದ್ದ
ಅಪ್ಪ, ಅವನೇ ನನ್ನಪ್ಪ..
ಹೊರಟಾಗ ಅಳಲಿಲ್ಲ
ನೋವ ಮರೆಸಿ ಮೀಸೆಯ ಕುಣಿಸಿ
ತುಟಿಯ ಕಚ್ಚಿ ಶುಭವೆಂದ
ಅಪ್ಪ, ಅವನೇ ನನ್ನಪ್ಪ
ಎತ್ತರಕೆ ನಿಂತವನ ಕರೆದು
ಸ್ನೇಹ ಬೆಸೆದ, ಜಾರಿದಾಗ ಹೆದರಿಸದೆ
ಆಸರೆಯಾದ
ಅಪ್ಪ, ಅವನೇ ನನ್ನಪ್ಪ..
-ಗೋಪಾಲ್ ಯಡಗೆರೆ, ಶಿವಮೊಗ್ಗ