ಅನುದಿನ‌ ಕವನ-೧೫೦೮, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್

ನನ್ನ ಮುಗುಳ್ನಗೆಯ ಹಿಂದೆ ಬದುಕೆನ್ನುವುದೆಲ್ಲ ಅಡಗಿತ್ತು ಕೇವಲ ನಿನಗಾಗಿ
ಒಲವಿನ ಕಂಗಳ ಹಿಂದೆ ನನ್ನದೆನ್ನುವುದೆಲ್ಲ ಅರ್ಪಿತವಾಗಿತ್ತು ಕೇವಲ ನಿನಗಾಗಿ

ಅದೆಷ್ಟೋ ನೋವುಗಳ ಉರಿಯಲಿ ಸುಟ್ಟು ಬೂದಿಯಾಗಿತ್ತೋ ಮನವು
ಮತ್ತೆ ರೆಕ್ಕೆಗಳ ಫಡಫಡಿಸಿ ನೀಲಾಗಸದಿ ಹಾರತೊಡಗಿತ್ತು ಕೇವಲ ನಿನಗಾಗಿ

ಕಣ್ಣಿಲ್ಲದೆಯೂ ಕಾಮನಬಿಲ್ಲನು ನೋಡಬಯಸಿತ್ತು ನನ್ನೆದೆಯ ಬರಡು ನೆಲ
ನಿನ್ನೊಲವಿನ ಮಳೆ ಸುರಿದೊಡನೆ ರಂಗು ಮೂಡತೊಡಗಿತ್ತು ಕೇವಲ ನಿನಗಾಗಿ

ನನಗೇನು ಗೊತ್ತು ಬಯಲು ಸೀಮೆಯಲಿ ಕಡಲ ಕಲರವ ಕೇಳಬಹುದೆಂದು
ಅಲೆಯೊಂದು ತಾಕಿ ನನ್ನೊಳಗೊಂದು ಕಡಲ ಸೃಷ್ಟಿಸಿತ್ತು ಕೇವಲ ನಿನಗಾಗಿ

ಯಾರೋ ಕೇಳಿದರು ಇಳಿಸಂಜೆಯಲಿ ಸೂರ್ಯನಿಗೇನಿದೆ ಅಂಥ ಮಹತ್ವವೆಂದು
ಸಿದ್ಧನ ಇಡೀ ಇಳಿಯುವ ಬದುಕಿನ ಕೊನೆಯೇ ರಂಗೇರಿತ್ತು ಕೇವಲ ನಿನಗಾಗಿ


-ಸಿದ್ಧರಾಮ ಕೂಡ್ಲಿಗಿ
—–