ಅನುದಿನ ಕವನ-೧೫೦೯, ಕವಯಿತ್ರಿ: ಡಾ. ನಾಗರತ್ನಾ ಅಶೋಕ‌ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಝಲ್

ಗಝಲ್

ಸುರನದಿಯು ಸೂಸುವ ಬೆಳ್ನಗೆಯೆ
ಮನಸೆಳೆದ ನೊರೆಯಲೆಯು ನೀನು
ಕಾರ್ಮುಗಿಲ ಕೇಶರಾಶಿಯ ಲೀಲೆಯೆ
ಮಂದಾನಿಲದ ಮೇಘದನಿಯು ನೀನು

ಮಿನುಗುವ ಗಣ ತಾರಿಕೆಯಲಿ
ಧ್ರುವತಾರೆಯಾಗಿ ಮೆರೆದು ಸೆಳೆಯುವೆಯಾ
ಕಡಲೊಡಲ ಮುತ್ತಾಗಿ ಮೆರೆಯುವ
ಎನ್ನೊಲವಿನ ಕಲ್ಪನೆಯು ನೀನು

ಸ್ಮೃತಿವರ್ಣವ ಮಾಸಲು ಬಿಡದೆ
ನೆನಪಿನಣತೆಯ ಹಚ್ಚುತ ಬೆಳಗಿ
ತಪ್ಪುಒಪ್ಪುಗಳ ಲೆಕ್ಕವ  ಹಾಕುತ
ಸರಿದೂಗಿಸುವ ಮೌನದಲೆಯು ನೀನು

ಮನದ ಮಡುವಲಿ ಇಳಿದು
ಒಡಲ ತುಂಬಿ ಮಮತೆಯಾಗಿ
ಮೃದು ಮನದ ಮೊಗವರಳಿಸುವ
ಹಂಸದ ಹೊಂಗರಿಯು ನೀನು

ನಿನ್ನಾಣತಿಗೆ ಆಡುವ ರತುನಳಿಗೆ
ವಿರತಿ ವಿಭ್ರಮವು ನೋಡು
ಉಸಿರ ಬಿಸುಸುಯಿಗೆ ಬಾಡದಿರುವ
ಕುಸುಮ ಮಾಲಿಕೆಯು ನೀನು

-ಡಾ. ನಾಗರತ್ನಾ ಅಶೋಕ್ ಭಾವಿಕಟ್ಟಿ, ಹುನಗುಂದ
—–