ಪ್ರೊ. ಅಸ್ಸಾದಿ, ಡಾ.‌ನಾ.‌ಡಿಸೋಜಾ, ನಾಗವಾರರಿಗೆ ನುಡಿನಮನ: ಕಾರ್ಪೊರೇಟ್ ವಲಯದಲ್ಲೂ ಸಮಾನತೆ ಅಗತ್ಯ -ಪ್ರಾಚಾರ್ಯ ಡಾ.‌ಪ್ರಹ್ಲಾದ ಚೌಧರಿ ಅವರು ಪ್ರತಿಪಾದನೆ

ಬಳ್ಳಾರಿ, ಫೆ.21: ಕಾರ್ಪೊರೇಟ್ ವಲಯದಲ್ಲೂ ಸಮಾನತೆ ಅಗತ್ಯವಾಗಿದೆ ಎಂದು ಸರಳಾದೇವಿ( ಎಸ್.ಎಸ್.ಎ) ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.‌ಪ್ರಹ್ಲಾದ ಚೌಧರಿ ಅವರು ಪ್ರತಿಪಾದಿಸಿದರು.
ಕಾಲೇಜಿನ ರಾಜ್ಯ ಶಾಸ್ತ್ರ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ  ಹಾಗೂ ದಲಿತ ಸಾಹಿತ್ಯ ಪರಿಷತ್ತು,ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಶುಕ್ರವಾರ (ಫೆ.21) ಜರುಗಿದ ಹಿರಿಯ ಸಾಹಿತಿ ಡಾ. ನಾ. ಡಿಸೋಜ, ಹಿರಿಯ ಚಿಂತಕ ಪ್ರೊ. ಮುಜಾಪ್ಫರ್  ಅಸ್ಸಾದಿ ಮತ್ತು ಪ್ರಗತಿಪರ ಹೋರಾಟಗಾರ ಲಕ್ಷ್ಮೀನಾರಾಯಣ ನಾಗವಾರ ಅವರ ನುಡಿನಮನ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಳಸಮುದಾಯಗಳಿಗೆ ಕಾರ್ಪೋರೆಟ್ ವಲಯದಲ್ಲಿ ಉದ್ಯೋಗಗಳು ಗಗನ ಕುಸುಮವಾಗಿವೆ. ಈ ಹಿನ್ನಲೆಯಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಲು ಶ್ರಮಿಸುವ ಅಗತ್ಯವಿದೆ ಎಂದು ಹೇಳಿದರು.          ವೈಚಾರಿಕ ದಿಗ್ಗಜರಾದ ಡಾ. ನಾ. ಡಿಸೋಜಾ, ಡಾ. ಮುಜಾಪ್ಫರ್ ಅಸ್ಸಾದಿ ಹಾಗೂ ಲಕ್ಷ್ಮೀನಾರಾಯಣ ನಾಗವಾರ ಅವರು ಸಮ ಸಮಾಜ ನಿರ್ಮಾಣಕ್ಕೆ ದುಡಿದ ಮಹನೀಯರು ಎಂದು ಶ್ಲಾಘಿಸಿದರು.

ಪ್ರೊ. ಮುಜಾಪ್ಫರ್  ಅಸ್ಸಾದಿ ಅವರ ಕುರಿತು ಮಾತನಾಡಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೊನ್ನೂರಾಲಿ. ಐ ಅವರು, ದೇಶದಲ್ಲಿ ಜ್ಞಾನವನ್ನು ಮುಚ್ಚಿಡುವ ಸಂಸ್ಕೃತಿ ವ್ಯಾಪಕವಾಗಿದ್ದು ಇದು ಸಮ‌ ಸಮಾಜ, ಪ್ರಗತಿಗೆ ಅಡ್ಡಿಯಾಗಿದೆ ಎಂದರು.
ಸದಾ ತಳ‌ ಸಮುದಾಯಗಳ, ನೊಂದವರ ಧ್ವನಿಯಾಗಿದ್ದ ಪ್ರೊ.‌ಅಸ್ಸಾದಿ ಅವರನ್ನು ಬಂಡಾಯ ಸಂತ ಎಂದು ಕರೆಯಲಾಗುತ್ತಿತ್ತು ಎಂದು ತಿಳಿಸಿದರು.
ಪ್ರೊ. ಅಸ್ಸಾದಿ‌ ಅವರ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಇವರು ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿರುವಂತೆ  ನಾಗರಹೊಳೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿದರೆ ಮಾತ್ರ ಇವರ ಆತ್ಮಕ್ಕೆ ಶಾಂತಿ‌ ಲಭಿಸಲಿದೆ ಎಂದು ಹೇಳಿದರು.
ವಿದೇಶದಲ್ಲಿ ವಿಶೇಷ ಅಧ್ಯಯನ ಮಾಡಿದ್ದ ಪ್ರೊ. ಅಸ್ಸಾದಿ ಅವರ ಪ್ರತಿಭೆಯನ್ನು ಸರಕಾರಗಳು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಿತ್ತು ಎಂದು  ತಿಳಿಸಿದರು.

ಡಾ. ನಾ.ಡಿಸೋಜಾ ಅವರ ಕುರಿತು ಮಾತನಾಡಿದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.‌ಟಿ. ರಾಮಸ್ವಾಮಿ ಅವರು ಸಮಾಜವನ್ನು ಎಚ್ಚರಿಸುವ ಸಾಹಿತ್ಯವನ್ನು ರಚಿಸಿದ ಡಾ.‌ನಾ.‌ಡಿ ಅವರು ಕನ್ನಡದ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.
ಪರಿಸರವಾದಿಯಾಗಿದ್ದ ಇವರು ಸಾಹಿತ್ಯ ಧರ್ಮವನ್ನು ಎತ್ತಿಹಿಡಿದ ಜನಪರ ಸಾಹಿತಿ ಎಂದು ಗುಣಗಾನ‌ ಮಾಡಿದರು.

ಲಕ್ಷ್ಮೀನಾರಾಯಣ ನಾಗವಾರ ಅವರ ಕುರಿತು ಮಾತನಾಡಿದ ರಾಜ್ಯಶಾಸ್ತ್ರ ವಿಭಾಗದ  ಉಪನ್ಯಾಸಕ ಡಾ. ಟಿ. ದುರುಗಪ್ಪ ಅವರು, ವಿದ್ಯಾರ್ಥಿ ದೆಸೆಯಿಂದಲೇ ದಲಿತ ಚಳವಳಿಯಲ್ಲಿ  ನಾಗವಾರ ಅವರುಗುರುತಿಸಿಕೊಂಡಿದ್ದರು ಎಂದರು.
ದಲಿತ ಚಳವಳಿ ಸಂಸ್ಥಾಪಕರಾದ ಪ್ರೊ.ಬಿ.ಕೃಷ್ಣಪ್ಪ, ಡಾ.‌ಸಿದ್ದಲಿಂಗಯ್ಯ, ನಾಡೋಜ ದೇವನೂರು ಮಹಾದೇವ ಅವರ ಮಾರ್ಗದರ್ಶನದಲ್ಲಿ ರಾಜ್ಯದ ವಿವಿಧೆಡೆ ಹಲವು ಹೋರಾಟಗಳನ್ನು ರೂಪಿಸಿ, ಯಶಸ್ವಿಯಾಗಿದ್ದರು ಎಂದು ಹೇಳಿದರು.
ಒಡೆದು ಹೋಗಿದ್ದ ದಲಿತ ಸಂಘರ್ಷ ಸಮಿತಿಯನ್ನು ಒಗ್ಗೂಡಿಸಲು ಪ್ರಯತ್ನಗಳನ್ನು ಹಾಕಿದ್ದರು. ನಾಗವಾರ ಅವರು ಸಮುದಾಯವನ್ನು ಜಾಗೃತಗೊಳಿಸಿ, ಮತ್ತೆ ಸಂಘಟನೆ ಬಲಪಡಿಸಲು ರಾಜ್ಯದ ವಿವಿಧೆಡೆ ಅಧ್ಯಯನ ಶಿಬಿರಗಳನ್ನೂ ನಡೆಸಿದ್ದರು ಎಂದು ತಿಳಿಸಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹುಚ್ಚುಸಾಬ್, ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಪ್ರೊ.‌ಬಸವರಾಜ್, ವೇದಿಕೆಯಲ್ಲಿ ಇದ್ದರು.

ಜಾನಪದ ಗಾಯಕ ಎಸ್ ಎಂ‌ ಹುಲುಗಪ್ಪ ಜಾಗೃತಿ ಗೀತೆಗಳನ್ನು ಹಾಡಿದರು.
ಸಂತಾಪ: ಕಾರ್ಯಕ್ರಮಕ್ಕೆ ಮುನ್ನ ಮೂವರು ದಿಗ್ಗಜರಿಗೆ‌ ಸಂತಾಪ ಸೂಚಿಸಿ ಎರಡು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಲಾಯಿತು.
ದಸಾಪ ಜಿಲ್ಲಾಧ್ಯಕ್ಷ ಡಾ. ನಾಗಪ್ಪ ಬಿ.ಇ ಸ್ವಾಗತಿಸಿದರು.
ದಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ, ಪತ್ರಕರ್ತ ಸಿ.‌ಮಂಜುನಾಥ್ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಗಂಟೆಪ್ಪ ಶೆಟ್ಟಿ ವಂದಿಸಿದರು.

ವಿವಿಧ ವಿಭಾಗಗಳ‌ ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.


——