ನನ್ನೊಡಲ ಜಗಲಿಯಲ್ಲಿ …
ನಾನೇಕೆ ನನ್ನನ್ನು ನಾನು
ತೀರಾ ನಾಚಿಕೆಯಿಂದ ಬಚ್ಚಿಟ್ಟುಕೊಳ್ಳಲಿ ?
ನಿಮ್ಮ ಮಕ್ಕಳಿಗೆ ತೊಟ್ಟಿಲಾದೆ,
ಅದಕ್ಕೆ ನಾನು ಹೆಮ್ಮೆ ಪಡುತ್ತೇನೆ
ಅಷ್ಟಕ್ಕೂ ಉರಿವ ಈ ತಿರುಳನು
ಮುಚ್ಚಿಡುವ ಅವಶ್ಯಕತೆ ನನಗಿಲ್ಲ
ಮನೆಯ ಅಂಗಳದಲಿ ಆಡುವ
ಮಕ್ಕಳ ನಾಡಿಯೂ ನನ್ನದೇ !
ನೀವು ನನ್ನನ್ನು ಪರೀಕ್ಷಿಸಿಯೇ
ಅವಳಿಗೆ ಉದ್ದನೆಯ ಲಂಗವ
ತೊಡಿಸಿದ್ದು, ಹೆಸರನ್ನೂ ಇಟ್ಟಿದ್ದು
ಕೈಗೆ ಸೌಟು ಪಾತ್ರೆಯನ್ನು ಕೊಟ್ಟಿದ್ದು!
ಇಷ್ಟಕ್ಕೂ ನೀವು ನನ್ನನ್ನು ನನ್ನವರನ್ನು
ಇತಿಹಾಸದುದಕ್ಕೂ ಸಂತ್ರಸ್ತರನ್ನಾಗೇ
ಮಾಡಿದ್ದೀರಿ, ಅಪರಾಧ ನನ್ನದಲ್ಲದಿರುವಾಗ
ಆಪಾದನೆಯೂ ನನಗೆ ಬೇಡದ ವಿಷಯ..
ಕಾಲದ ಸರಪಳಿಗೆ ಸೀಮಿತವಾದೆ
ಆದರೂ ಮಣಿಯದ ನಾನು
ಈಗಲೂ ಆಡಲು ಮಾತಿದ್ದರೂ
ಮೌನವಾಗೇ ಉಳಿದಿರುವೆ ನನ್ನಷ್ಟಕ್ಕೆ ..
ನನ್ನೊಡಲ ಜಗಲಿಯಲ್ಲಿ ದಿನವೂ
ಹಣತೆ ಹಚ್ಚುತ್ತೇನೆ ನನ್ನವರ
ಅಳಲೂ ಅಲ್ಲಿ ಪ್ರತಿಧ್ವನಿಸುವಾಗ
ಹೌದು ನೆತ್ತರು ಹರಿಸುವ ಮುಟ್ಟಿನ
ನೋವನ್ನು ಆಚರಿಸುತ್ತೇನೆ
ಸಂಭ್ರಮಿಸುತ್ತೇನೆ
ದಿನದ ಕೊನೆಯಲ್ಲಿ ಬಚ್ಚಲ
ಮನೆಯ ಕೋಣೆಯಲ್ಲಿ ಕುಳಿತು
ಸ್ವತಂತ್ರದ ದಿನಚರಿಯ ತಿರುವಿಹಾಕುವ
ದಿನಗಳಿಗಾಗಿ ಕನಸು ಕಾಣುತ –
ಬೇಡುವೆ.. ಕಡೆಯಲ್ಲಿ ತುಸು ಅತ್ತುಬಿಡುವೆ.
-ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು
—–