ಪ್ರಾರ್ಥನೆ…
ನೂರೆಂಟು ಒತ್ತಡಗಳಿವೆ
ಬದುಕಿನುದ್ದಕ್ಕೂ
ಆದರೆ ಈ ಪ್ರಾರ್ಥನೆಯೊಂದು
ಕೈ ಹಿಡಿದು ನಡೆಸಿದೆ…
ಹೆಂಡತಿ, ಮಕ್ಕಳು
ಸಂಸಾರದ ಗೋಜು
ಸಮಾಜದ ಗದ್ದಲಗಳ ನಡುವೆ
ಈ ನಿನ್ನ ಪ್ರಾರ್ಥನೆಯೊಂದು
ಸಾರಾಸಗಟಾಗಿ ಎಲ್ಲವನ್ನು ಮುನ್ನಡೆಸಿದೆ…
ಹಲವು ಗೊಂದಲಗಳು
ಏರಿಳಿತಗಳು
ದುಃಖ ದುಮ್ಮಾನಗಳ ನಡುವೆ
ನಿನ್ನ ಪ್ರಾರ್ಥನೆಯೊಂದು
ಎಲ್ಲವನ್ನು ಬದಿಗೆ ಸರಿಸಿ
ಸಮಚಿತ್ತವಾಗಿ ಮನವ ಇರಿಸಿದೆ…
ಇಲ್ಲಿ ದೇವರಿಗೆ ಸಿಕ್ಕಷ್ಟು ಮಾನ್ಯತೆ
ಮನುಷ್ಯನಿಗೆ ಸಿಕ್ಕಿಲ್ಲ
ಕೊಳೆ ತುಂಬಿ ಹೋದ ಬಹುಪಾಲು ಹೃದಯಗಳು
ಕೊಳೆ ತೊಳೆದುಕೊಂಡಿಲ್ಲ
ಅದಕ್ಕೆ ನಾನು
ನಿನ್ನ ಪ್ರಾರ್ಥನೆಗೆ ಅಣಿಯಾಗಿದ್ದೇನೆ ಬುದ್ಧ…
ಗೇಲಿ ಮಾಡುವವರು ಮಾಡಲಿ
ನನಗೆ ನಿನ್ನ ಮೇಲೆ
ಸಂಪೂರ್ಣ ನಂಬಿಕೆ ಇದೆ
ನನ್ನ ಪ್ರಾರ್ಥನೆಯೊಂದು
ನನ್ನ ಸದಾ ಕಾಯುವುದೆಂದು…
-ಸಿದ್ದು ಜನ್ನೂರ್, ಚಾಮರಾಜ ನಗರ
—–