ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಡ ಮತ್ತು ಬುನಾದಿ ಎರಡೂ ಮುಖ್ಯ -ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಡ ಮತ್ತು ಬುನಾದಿ ಎರಡೂ ಮುಖ್ಯವೆಂದು ರೂಪಕದ ಮೂಲಕ ಹೇಳಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರು ಹೇಳಿದರು.

ಅವರು ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕನ್ನಡ ಪರಿಷತ್ತಿನ ಪ್ರತಿಷ್ಟಿತ ದತ್ತಿ ಪ್ರಶಸ್ತಿಗಳಾದ ಪ್ರೊ.ಸಿ.ಎಚ್.ಮರಿದೇವರು ಪ್ರತಿಷ್ಠಾನ ದತ್ತಿ ಹಾಗೂ ರಾಜಸಭಾ ಭೂಷಣ ಶ್ರೀ ಕರ್ಪೂರ ಶ್ರೀನಿವಾಸ ರಾವ್ ದತ್ತಿ ಹಾಗೂ ಕರ್ಪೂರ ರಾಮರಾವ್ ಜನ್ಮ ಶತಾಬ್ದಿ ದತ್ತಿ ಪುರಸ್ಕಾರಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಆಧುನಿಕತೆಗೆ ಸ್ಪಂದಿಸುವಂತೆಯೇ ತನ್ನ ನಿರ್ಮಾತೃಗಳನ್ನು ಪರಿಷತ್ತು ಸದಾ ಸ್ಮರಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿ ಇಟ್ಟಿಗೆಯೂ ಕರ್ಪೂರ ಶ್ರೀನಿವಾಸ ರಾಯರು ಪರಿಷತ್ತಿಗೆ ನೀಡಿದ ಕೊಡುಗೆಗಳ ಬಗ್ಗೆ ಹೇಳುತ್ತದೆ ಎಂದು ಹೇಳಿ ಅವರ ಮೊಮ್ಮಗಳು ಮತ್ತು ಅವರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನಗೆ ಅಪಾರ ಸಂತೋಷ ತಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಗಳಿಗೆ ವಿಶಿಷ್ಟ ಪರಂಪರೆ ಇದ್ದು ಅದರ ದಾನಿಗಳು ಪರಿಷತ್ತಿನ ಮೇಲೆ ಅಪಾರ ವಿಶ್ವಾಸವನ್ನು ಇಟ್ಟು ಅದನ್ನು ಸ್ಥಾಪಿಸಿದ್ದಾರೆ. ಯಾವುದೇ ಅರ್ಜಿ-ಮರ್ಜಿಗಳಿಲ್ಲದೆ ಅರ್ಹರನ್ನು ಹುಡುಕಿ ಪುರಸ್ಕಾರ ನೀಡುವ ಮೂಲಕ ದತ್ತಿ ದಾನಿಗಳ ಆಶಯವನ್ನು ಸಾರ್ಥಕಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ ಕರ್ಪೂರ ಶ್ರೀನಿವಾಸ ರಾಯರ ಕೊಡುಗೆಗಳನ್ನು ಮತ್ತು ವಿದ್ವತ್ತನ್ನು ಸ್ಮರಿಸಿ ಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರೆಲ್ಲರನ್ನೂ ಕರೆದು ಸನ್ಮಾನಿಸುವ ಕಾರ್ಯವನ್ನು ಶ್ರದ್ಧೆಯಿಂದ ಮಾಡುತ್ತಿದ್ದು ಈಗಾಗಲೇ ಕಿಟಲ್ ವಂಶಸ್ಥರನ್ನು ಗೌರವಿಸಲಾಗಿದೆ. ಮುಂಬರುವ ಬಳ್ಳಾರಿಯಲ್ಲಿ ಅಯೋಜಿತವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಥಾಮಸ್ ಮನ್ರೂ ಅವರ ವಂಶದವರನ್ನು ಗೌರವಿಸಲಾಗುವುದು ಎಂಬ ಮಾಹಿತಿಯನ್ನು ನೀಡಿದರು.
ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೃಷ್ಣದೀಕ್ಷಿತ್ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾರಸ್ವತ ಲೋಕದ ಕಿರೀಟ ಎಂದು ಬಣ್ಣಿಸಿ, ಕನ್ನಡ ನಿತ್ಯ ಭಾಷೆಯಾಗ ಬೇಕು, ಕನ್ನಡಿಗರಿಗೆ ಉದ್ಯೋಗಗಳು ದೊರಕಬೇಕು. ಕನ್ನಡದಲ್ಲಿಯೇ ಕಾನೂನು ದೊರೆತರೆ ತೀರ್ಪಿನ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಲಿದೆ. ಎಂದು ಹೇಳಿ ಕನ್ನಡದ ಪರಂಪರೆಯನ್ನು ತಮ್ಮ ಮಕ್ಕಳಿಗೆ ಕಲಿಸುವಂತೆ ಸೂಚಿಸಿದರು.
ಕರ್ಪೂರ ಶ್ರೀನಿವಾಸ ರಾವ್ ಅವರ ಮರಿಮೊಮ್ಮಗಳು ನಿರ್ಮಲ ಕರ್ಪೂರರಾವ್ ಕನ್ನಡ ಸಾಹಿತ್ಯ ಪರಿಷತ್ತನ್ನು ತಮ್ಮ ತವರು ಮನೆ ಎಂದು ಬಣ್ಣಿಸಿ ದೂರದ ಅಮೆರಿಕೆಯಲ್ಲಿ ಕನ್ನಡ ನುಡಿಯನ್ನು ಉಳಿಸಿ ಕೊಳ್ಳಲು ತಾವು ಮಾಡಿದ ಪ್ರಯತ್ನಗಳನ್ನು ವಿವರಿಸಿದರು. ಐ.ಎಸ್.ಐನ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಕೃಷ್ಣಕುಮಾರ್ ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದರು. ದತ್ತಿದಾನಿಗಳ ಪ್ರತಿನಿಧಿಯಾಗಿ ಎಸ್.ರಾಜಶೇಖರ ಅವರು ಮಾತನಾಡಿದರು.


ತುಮಕೂರು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ, ಹಿರಿಯ ಲೇಖಕರು, ಶಿಕ್ಷಣ ತಜ್ಞರೂ ಆಗಿದ್ದ ಪ್ರೊ.ಸಿ.ಎಸ್.ಮರಿದೇವರು ಸ್ಥಾಪಿಸಿರುವ ಪುರಸ್ಕಾರಕವನ್ನು 2024ನೆಯ ಸಾಲಿನಲ್ಲಿ ಡಾ.ಬಿ.ವಿ.ವಸಂತ ಕುಮಾರ್ (ಶಿಕ್ಷಣ), ಎಂ.ನಂಜುಂಡ ಸ್ವಾಮಿ ಐಪಿಎಸ್, (ಕನ್ನಡ ಸೇವೆ) ಸುಧಾ ನರಸಿಂಹ ರಾಜು (ಕಲಾ ಸೇವೆ) ಮತ್ತು ಸಿದ್ಧಗಂಗಯ್ಯ ಹೊಲತಾಳು (ಕೃಷಿ ಸೇವೆ) ಅವರು ಭಾಜನರಾಗಿದ್ದಾರೆ. ರಾಜಸಭಾ ಭೂಷಣ ಕರ್ಪೂರ ಶ್ರೀನಿವಾಸ ರಾಯರ ಪುರಸ್ಕಾರವನ್ನು 2023ನೆಯ ಸಾಲಿನಲ್ಲಿ ಸುಪ್ರಿಯ.ಎಸ್.ಆರ್ ಕರ್ಪೂರ ರಾಮರಾಯರ ಜನ್ಮ ಶತಾಬ್ಧಿ ಮಮತಾ.ಎಸ್.ಟಿ ಮತ್ತು ಬಾಲಗೌರಮ್ಮ ಸ್ವೀಕರಿಸಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ನಿರೂಪಿಸಿದರು. ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿಯವರು ಸ್ವಾಗತಿಸಿದರು, ಇನ್ನೋರ್ವ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ವಂದಿಸಿದರು.
ಅಪಾರ ಕನ್ನಡಾಭಿಮಾನಿಗಳು, ಪರಿಷತ್ತಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
—–