ಮಹಾ ಶಿವರಾತ್ರಿ ಪ್ರಯುಕ್ತ ಕವಯಿತ್ರಿ ಶೋಭ ಮಲ್ಕಿಒಡೆಯರ್ ಅವರ ಶಿವ ಮಹಾತ್ಮೆ ಕವಿತೆ ಪ್ರಕಟಿಸಲಾಗಿದೆ. ಎಲ್ಲರಿಗೂ ಮಹಾ ಶಿವರಾತ್ರಿಯ ಶುಭಾಶಯಗಳು.
(ಸಂಪಾದಕರು)
ಶಿವ ಮಹಾತ್ಮೆ
ನಂಬಿ ಕರೆಯಲು ಓ ಎನ್ನನೇ ಶಿವನು
ಕೈಲಾಸ ಗಿರಿ ಶಿಖರದ ಪರಮಾತ್ಮನು
ಗಂಗೆಯ ಮುಡಿಯೊಳು ಧರಿಸಿದ ಜಟಾಧರನು
ಗೌರಿಯ ಪಕ್ಕದಲ್ಲಿ ಕರೆದ ಗೌರಿಪ್ರಿಯನು //
ಧನ ಕನಕ ಆಡಂಬರದ ಪೂಜೆ ಯಾಕೆಂದೆ
ಬಿಲ್ವ ಪತ್ರಿಯ ಮುಡಿಸಿದರೆ ಸಾಕೆಂದೆ
ರುದ್ರಾಕ್ಷಿ ಮಾಲೆಯ ಧರಿಸಿದಾ ತಂದೆ
ಕೊರಳೊಳು ನಾಗ ಸರ್ಪವಾ ನೀ ಸುತ್ತಿದೆ //
ಭಸ್ಮಾಂಬರಧಾರಿ ತ್ರಿನೇತ್ರನು
ವಿಷವನ್ನು ಕುಡಿದಾ ವಿಷಕಂಠನು
ಲೋಕವನುಳಿಸಿದಾ ನಂಜುಂಡೇಶ್ವರನು
ಗತಿ ನೀನೆನ್ನಲು ಕರುಣಾಸಾಗರನು //
ಜ್ಞಾನ ದೀವಿಗೆಯ ಬೆಳಗಿಸು ತಂದೆ
ಅಜ್ಞಾನವನ್ನು ಅಳಿಸಿಬಿಡು ಇಂದೆ
ನಿನ್ನ ನಾಮವ ಪಾಡುತಿಹ ಭಕ್ತರು ನಿನ್ಮುಂದೆ
ಕಷ್ಟ ಸರಿಸಿ ಮೋಕ್ಷವ ನೀಡು ಸಾಕೆಂದೆ //
ಶಿವರಾತ್ರಿಯಂದು ಪೂಜೆ-ಪುನಸ್ಕಾರ ಪಠಣ
ಗುಡಿ ಗುಂಡಾರದೊಳು ನೆರೆದಿದೆ ಭಕ್ತ ಗಣ
ಫಲಫುಷ್ಪದಿ ಅಲಂಕೃತವಾಗಿದೆ ದೇಗುಲ ತಾಣ
ನಿನ್ನ ಸ್ಮರಣೆಯೊಂದಿರಲು ನರ ಜನ್ಮ ಪಾವನ //
-ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ