ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ ಜಾನಪದದತ್ತ ವಿದೇಶಿಯರು ಆಕರ್ಷಿತ -ಕುಲಸಚಿವ ರುದ್ರೇಶ ಎಸ್. ಎನ್

 

ಬಳ್ಳಾರಿ, ಫೆ.27:ಕನ್ನಡ ನಾಡಿನ ಶ್ರೀಮಂತ ಕಲೆ, ಸಂಸ್ಕೃತಿ,  ಜಾನಪದದತ್ತ ವಿದೇಶಿಯರು ಆಕರ್ಷಿತರಾಗುತ್ತಿದ್ದಾರೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ‌ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ ಎಸ್. ಎನ್ ಅವರು ಹೇಳಿದರು.
ಹಳೇ ದರೋಜಿ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್‌ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿಯಲ್ಲಿ ಇಲ್ಲಿನ ಕುವೆಂಪು‌ನಗರದ ಶ್ರೀ ಅಮೃತೇಶ್ವರ ದೇವಸ್ಥಾನದ‌ ಬಳಿ ಬುಧವಾರ ಸಂಜೆ
ಆಯೋಜಿಸಿದ್ದ ಕರ್ನಾಟಕ ಜಾನಪದ ದಿಬ್ಬಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನ‌‌ ಖಾಸಗಿ ವಿಶ್ವವಿದ್ಯಾಲಯದವೊಂದರಲ್ಲಿ ಜಾನಪದ ನೃತ್ಯ, ಸಂಗೀತ, ಹಾಡು ಕಲಿಯಲು ವಿದೇಶಿ ವಿದ್ಯಾರ್ಥಿಗಳು ಒಂದು ವರ್ಷಕ್ಕೆ 10 ಲಕ್ಷ ರೂ. ಶುಲ್ಕ ಪಾವತಿಸುತ್ತಾರೆ ಆದರೆ  ನಮ್ಮ ವಿದ್ಯಾರ್ಥಿಗಳು  ಜಾನಪದದ ಮಹತ್ವ ಅರಿಯದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ವಿಷಾಧಿಸಿದರು.


ಪಾಲಕರು ತಮ್ಮ‌ಮಕ್ಕಳಲ್ಲಿರುವ ಪ್ರತಿಭೆ, ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದರು.
ನಾಡೋಜ‌ ಬುರ್ರಕಥಾ ದರೋಜಿ ಈರಮ್ಮ‌ಮಹಾನ್‌ ಪ್ರತಿಭೆ. ಅಶಿಕ್ಷಿತರಾಗಿದ್ದರೂ ಹತ್ತು ಸಾವಿರ ಹಾಡುಗಳ ಕಣಜ ಅವರಾಗಿದ್ದರು ಎಂದು ಕೊಂಡಾಡಿದರು.
ಜನಪದೀಯರು ತಮ್ಮ ಶ್ರಮ ನೀಗಿಸಲು, ಮನಸ್ಸು ಹಗುರ ಕಡಿಮೆ ಮಾಡಿಕೊಳ್ಳಲು ಜನಪದ ಹಾಡುಗಳ ಮೊರೆ ಹೋಗುತ್ತಿದ್ದರು ಎಂದು ಬೀಸುವ, ಕುಟ್ಟುವ ಹಾಡುಗಳನ್ನು ರುದ್ರೇಶ ಉದಾಹರಿಸಿದರು.
ಮನಶಾಸ್ತ್ರಜ್ಞರ ಪ್ರಕಾರ ಪ್ರತಿಯೊಬ್ಬರು ಯಾವುದಾದರೂ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಸಂತಸದಿಂದ ಇರಬೇಕು ಎಂದು ತಿಳಿಸಿದರು.


ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಲ್ಯಾಣ ಸಂಸ್ಥಾನ‌ಮಠದ ಶ್ರೀ ಕಲ್ಯಾಣ ಸ್ವಾಮೀಜಿ ಅವರು ಮಾತನಾಡಿ ಕಲಾವಿದರೆಂದರೆ ಶಿವನ ಪ್ರತಿರೂಪ ಎಂದು ಶ್ಲಾಘಿಸಿದರು.
ಜನಪದ, ರಂಗಭೂಮಿ ಕಲಾವಿದರನ್ನು ಗೌರವಿಸಬೇಕು.‌ ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಇವರಿಗೆ ಬಹುಮಾನ, ಪ್ರಶಸ್ತಿ ಪುರಸ್ಕಾರಗಳ ಮೂಲಕ ಗೌರವಿಸಬೇಕು ಎಂದು ಹೇಳಿದರು.
ಭಾರತೀಯ ಸಂಸ್ಕೃತಿ, ಪರಂಪರೆಗಳನ್ನು ಅಧಿಕಾರಿಗಳು ಅಳವಡಿಸಿಕೊಳ್ಳಬೇಕು.
ಹಬ್ಬ ಹರಿದಿನಗಳು ಮನುಷ್ಯರಲ್ಲಿ ಸದ್ಗುಣ ಬೆಳೆಸುತ್ತವೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ ಅವರು ಮಾತನಾಡಿ, 67 ವರ್ಷಗಳ ಬಳಿಕ‌ ಬಳ್ಳಾರಿಯಲ್ಲಿ ನಡೆಯುತ್ತಿರುವ ಅಖಿಲ‌ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ‌ ನಗರ, ಜಿಲ್ಲೆಯ ಜನತೆ ಬೆಂಬಲಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.


ಕರ್ನಾಟಕ ಜಾನಪದ ಪರಿಷತ್ತಿನ‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ್ ಮಾತನಾಡಿ, ಬಳ್ಳಾರಿ ‌ಜಿಲ್ಲೆ ಪ್ರಾಕೃತಿಕವಾಗಿ ಮಾತ್ರವಲ್ಲ ಸಾಂಸ್ಕೃತಿಕವಾಗಿಯೂ ಶ್ರೀಮಂತ ಜಿಲ್ಲೆ. ಅವಿಭಜಿತ ಬಳ್ಳಾರಿ ಜಿಲ್ಲೆಯ ಎಂಟಕ್ಕೂ ಹೆಚ್ಚು‌ ಸಾಧಕರು ಹಂಪಿ ‌ಕನ್ನಡ‌ವಿವಿಯ‌ ಪ್ರತಿಷ್ಠಿತ ನಾಡೋಜ ಪದವಿಗೆ ಭಾಜನಾರಾಗಿರುವುದೇ‌ ಇದಕ್ಕೆ ಸಾಕ್ಷಿ . ನಾಡೋಜ ದರೋಜಿ ಈರಮ್ಮ, ಬೆಳಗಲ್ಲು ವೀರಣ್ಣ, ಕಪ್ಪಗಲ್ಲು ಪದ್ಮಮ್ಮ, ಡಾ. ಸುಭದ್ರಮ್ಮ‌ಮನ್ಸೂರು, ಡಾ. ವಿ ಟಿ ಕಾಳೆ ಮತ್ತಿತರರು ತಮ್ಮ ಪ್ರತಿಭೆ, ಸಾಧನೆಗಳ‌ ಮೂಲಕ ನಾಡಿಗೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕುವೆಂಪು ನಗರ ಶ್ರೀ ಅಮೃತೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಕೋಶಾಧ್ಯಕ್ಷ ಮರಿಗೌಡ ಪಾಟೀಲ್, ಕುವೆಂಪು ‌ನಗರವನ್ನು ಸಾಂಸ್ಕೃತಿಕ ‌ನಗರವನ್ನಾಗಿ ರೂಪಿಸಲು ಶ್ರಮಿಸಲಾಗುವುದು ಹಾಗೂ ಮುಂದಿನ‌ ವರ್ಷದಿಂದ ಎಲ್ಲರ ಸಹಕಾರ, ನೆರವಿನೊಂದಿಗೆ ಶ್ರೀ ಅಮೃತೇಶ್ವರ ‌ರಥೋತ್ಸವವನ್ನು ಆಚರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ನಗರ ನಾಗರೀಕ‌ ವೇದಿಕೆಯ  ಅಧ್ಯಕ್ಷ ವಿ. ಬಿ.‌ಹಿರೇಮಠ ಮತ್ತು
ಕಸಾಪ ತಾಲೂಕು ಅಧ್ಯಕ್ಷ ಕೆ. ವಿ ನಾಗರೆಡ್ಡಿ ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ವಿ ಚ್ ಹುಲುಗಪ್ಪ, ದೇವಸ್ಥಾನದ ಸಮಿತಿ ಸದಸ್ಯರಾದ ಸಿ ರಾಘವೇಂದ್ರ ರೆಡ್ಡಿ, ಮೋಹನ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಸಮಾಳ‌ ಬಾರಿಸಿದ ರುದ್ರೇಶ: ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ವೇದಿಕೆಯಲ್ಲಿ ಪ್ರಸ್ತುತ ಪಡಿಸಿದ ವೀರಾಗಾಸೆ‌ ನೃತ್ಯಕ್ಕೆ ಕಲಾವಿದರೊಟ್ಟಿಗೆ ಕುಲ ಸಚಿವ ರುದ್ರೇಶ ಅವರು ಸಮಾಳ‌ಬಾರಿಸಿ ಸಭಿಕರರಿಂದ ಚಪ್ಪಾಳೆ ಗಿಟ್ಟಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಶ್ವ ರಾಮಣ್ಣ ಸೇರಿದಂತೆ ಅತಿಥಿ ಗಣ್ಯರನ್ನು  ದೇವಸ್ಥಾನ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಗಮನ ಸೆಳೆದ ಸಾಂಸ್ಕೃತಿಕ ಕಲಾ ಪ್ರದರ್ಶನಗಳು: , ತಾರನಗರದ ಬಸವರಾಜ ಸ್ವಾಮಿ ಮತ್ತು ತಂಡದವರಿಂದ ವೀರಾಗಾಸೆ ನೃತ್ಯ, ದೇವಲಾಪುರದ ಜಗದೀಶ್ ಮತ್ತು ತಂಡದವರಿಂದ ಗೊರವರ ಕುಣಿತ, ಬುಡ್ಗ ಜಂಗಮ ಸುರೇಶ ಮತ್ತು ತಂಡದವರಿಂದ ಶೂರ್ಪನಖಿ ಗರ್ವ ಭಂಗ ಎಂಬ ಜನಪದ ಹಗಲುವೇಷ ನಾಟಕ, ಹುಬ್ಬಳ್ಳಿಯ ನಾಟ್ಯಲೋಕದ ಬಸಯ್ಯ ಬನ್ನಿಗೊಳಮಠ ತಂಡದವರಿಂದ ಕಥಕಳಿ ನೃತ್ಯ ಪ್ರದರ್ಶನ, ರೇಣುಕಪ್ಪ ಮತ್ತು ಮಾರೇಶ ಅವರಿಂದ ಜಾನಪದ ಗಾಯನ, ಹುಬ್ಬಳ್ಳಿ ಸಂಗೀತ ವಿದೂಷಿ ಶೈಲಾ ಆರ್ ಹುಟಗಿ ಮತ್ತು ತಂಡದವರಿಂದ ಜಾನಪದ ನೃತ್ಯ ಪ್ರದರ್ಶನ, ಬಾಲು ಮತ್ತು ಈರಣ್ಣ ಅವರಿಂದ ತಾಷ ರಾಂಡೋಲ್, ಮಂಜುನಾಥ್ ಮತ್ತು ತಂಡದವರಿಂದ ಪೋಟಿವೇಷ, ರಾಘವೇಂದ್ರ ಮತ್ತು ತಂಡದವರಿಂದ ಆಂಜನೇಯ ಪ್ರವೇಶ , ಅವನಿ ಗಂಗಾವತಿ ಅವರಿಂದ ಜನಪದ ಭರತನಾಟ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ ತಂಡದವರಿಂದ ತತ್ವಪದ ಗಾಯನ, ನಾದಸ್ವರ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.


ನಾಡೋಜ‌ ಬುರ್ರಕಥಾ ದರೋಜಿ ಈರಮ್ಮ‌ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಅಶ್ವರಾಮು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯೋಜನೆಗಳನ್ನು ಜನರಿಗೆ ಮಾನವೀಯ ಸಾಮಾಜಿಕ ಮೌಲ್ಯಗಳನ್ನು ಬಿತ್ತರಿಸಲು ಮತ್ತು ಕರ್ನಾಟಕದ ಕಲೆ ಸಾಹಿತ್ಯ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.   ಉಪನ್ಯಾಸಕ ಆಲಂಭಾಷ‌ ಅವರು ನಿರೂಪಿಸಿದರು. ಚಂದ್ರಶೇಖರ್ ಪಾಟೀಲ್ ಅವರು
ವಂದಿಸಿದರು.
——-