ಅನುದಿನ ಕವನ-೧೫೨೦, ಕವಿ: ಪ್ರಕಾಶ ಕೋನಾಪುರ, ಶಿವಮೊಗ್ಗ, ಕವನದ ಶೀರ್ಷಿಕೆ:ಕೆಲವೊಂದು ನೋವುಗಳೇ ಹಾಗೆ…..

ಕೆಲವೊಂದು ನೋವುಗಳೇ ಹಾಗೆ…..

ಕೆಲವೊಂದು ನೋವುಗಳೇ ಹಾಗೆ
ಹೆಂಡತಿ ಬಿಟ್ಟರೆ ಬೇರೆ ಯಾರೊಂದಿಗೂ
ಹಂಚಿಕೊಳ್ಳಲಾಗುವುದಿಲ್ಲ ಗೆಳತಿ

ಕೆಲವೊಂದು ನೋವುಗಳನ್ನು
ಜೀವದ ಗೆಳೆಯನಿಗೆ ಬಿಟ್ಟರೆ ಗೆಳತಿ
ಹೆಂಡತಿಯೊಡನೆಯೂ
ಹಂಚಿಕೊಳ್ಳಲಾಗುವುದಿಲ್ಲ

ಕೆಲವೊಂದು ನೋವುಗಳನ್ನು
ಹೆಂಡತಿ ಜೀವದ ಗೆಳೆಯ
ಯಾರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ
ಅನುಭವಿಸಬೇಕು ನಾವೊಬ್ಬರೇ ಸದಾ
ಉಸಿರಿರುವವರೆಗೆ ನಿರಂತರ

ಎಷ್ಟೋ ನೋವುಗಳು ಎದಿಯೊಳಗೆ
ಕುಳಿತು ಕಳೆತು ಹುಣ್ಣಾಗಿವೆ
ಹುಣ್ಣುಗಳೆಲ್ಲ ಕಳೆತು ಕೀವಾಗಿವೆ
ಕೀವೊರೆಸಿ ಹುಣ್ಣಿಗೆ ಮದ್ದು ಹಚ್ಚುವಿಯಾದರೆ
ಬಾ ಹುಡುಗಿ ಎದೆಯ ಕದ ತೆರೆಯುತ್ತೇನೆ

ಒಡಲೊಳಗೆ ದ್ವೇಷದ ಬೀಜ ಇಟ್ಟುಕೊಂಡ
ಯಾರೊಬ್ಬರೂ ಪ್ರೀತಿಸಲಾಗುವುದಿಲ್ಲ ಹುಡುಗಿ
ದ್ವೇಷಕ್ಕೆ ಕೊನೆಯಿದೆ ಪ್ರೀತಿಗೆಂದೂ ಕೊನೆಯಿಲ್ಲ

ಪ್ರೀತಿಯ ಹೆಸರಿನಲ್ಲಿ
ಅಪ್ಪಿಕೊಳ್ಳಲು ಬರುವವರಿದ್ದಾರೆ ಎಚ್ಚರ
ಇರಿದು ಕೊಲ್ಲಲಾಗದವರು
ಅಪ್ಪಿಕೊಂಡು ಕೊಲ್ಲುವವರಿದ್ದಾರೆ

-ಪ್ರಕಾಶ ಕೋನಾಪುರ, ಶಿವಮೊಗ್ಗ
ಶಿವಮೊಗ್ಗ

09:55