ನೀನು ಬರುವವರೆಗೂ…………
ನೀನು ಬರುವವರೆಗೂ
ನನಗಾದರೂ ಏನು ಗೊತ್ತಿತ್ತು
ಪ್ರೇಮವು ಎರಡು ಆತ್ಮಗಳ
ಸಮ್ಮಿಲನವೆಂದು
ನೋವಿನಿಂದ ಬಿಕ್ಕುವ
ಭಾವಗಳ ದೀಪಕ್ಕೆ
ಕೈಯಾಸರೆಯೆಂದು
–
ನನಗಾದರೂ ಏನು ಗೊತ್ತಿತ್ತು
ಎದೆಯ ಭಾವಶರಧಿ ಉಕ್ಕೇರಿದಾಗ
ತಡೆಗೋಡೆಯಾಗಿ ಸಂತೈಸುವ
ಮಳಲ ತೀರವೆಂದು
ರೋದಿಸುವ ಕಪ್ಪುಬಿಳಿ
ಕನಸುಗಳಿಗೆ
ರಂಗನ್ನು ಮೆತ್ತಿ
ನಗಿಸುವುದೆಂದು
–
ನನಗಾದರೂ ಏನು ಗೊತ್ತಿತ್ತು
ಬದುಕಿನ ಕ್ಷಣಗಳು
ಅಂಗೈಯಲ್ಲಿಯೇ
ಜಾರಿಹೋಗುವಾಗ
ಕೈನೀಡಿ ಜೊತೆಯಾಗುವುದೆಂದು
ಎದೆಯ ಮೋಡಗಳ
ಕಂಬನಿಗಳ
ಬರಸೆಳೆದು ಹಸಿರ ಚಿಮ್ಮಿಸಿ
ಸಂತಸವನುಕ್ಕಿಸುವ
ಧರಣಿಯೆಂದು
–
ನನಗಾದರೂ ಏನು ಗೊತ್ತಿತ್ತು
ಮನದ ಬಯಲಿನ
ಬೇಸರದ ಮೊಗಕೆ
ಮಂದಹಾಸ ನೀಡುವ
ಅದೇ ತಾನೆ ಅರಳಿದ
ಚಂದದ ಹೂವೆಂದು
–
ಹೌದು ಒಲವೇ
ನೀನು ಬರುವವರೆಗೂ
ನೆಲಬಾನು ದಿಕ್ಕುಗಳ
ಸುರುಳಿಯೊಳು
ಬಂಧಿತನಾಗಿದ್ದೆ
ಜೀವನದ ಕ್ಷಣಗಳೇ
ಜೀವವ ಸೆಳೆಯುವ
ಪಾಶವೆಂದುಕೊಂಡಿದ್ದೆ
ಇದೀಗ ನೀನು ಬಂದೆ
ಪ್ರೀತಿಯ ಬಯಲಿನಲಿ
ಬಯಲಾಗುವ ಪರಿಯ ತೋರಿದೆ
ಪ್ರತಿ ಕ್ಷಣಗಳಿಗೆ
ಜೀವದಾಯಿನಿಯಾದೆ
ಎಲ್ಲೆಡೆಯೂ
ಕಂಡರೂ ಕಾಣದಂತೆ
ಕಾಣದಿದ್ದರೂ ಕಂಡಂತೆನಿಸುವ
ಪ್ರೇಮದ ಮೂರುತಿಯಾದೆ
-ಸಿದ್ಧರಾಮ ಕೂಡ್ಲಿಗಿ
—–