ಅನುದಿನ ಕವನ-೧೫೨೩, ಕವಿ: ಬಿ.ಪೀರ್ ಬಾಷ, ಹೊಸಪೇಟೆ, ಕವನದ ಶೀರ್ಷಿಕೆ:ನಮ್ಮ ಪಾಲಿಗಿಲ್ಲ ದೊರೆಯ ಕರುಣ

ನಮ್ಮ ಪಾಲಿಗಿಲ್ಲ ದೊರೆಯ ಕರುಣ.

ಕೊರಳ ಮೇಲಿಟ್ಟ ಖಡ್ಗದಂತೆ
ಚರಿತ್ರೆಯ ಪುಟವನ್ನೂ ಚೂಪಾಗಿಸಿ
ಕೊರಳ ಹಿರಿದು, ಕರುಳ ಬಗೆದು
ವಿರಾಟ ನೃತ್ಯಗೈದರೂ
ಸುಮ್ಮನಿರಬೇಕು.

ಸುಮ್ಮನಿರಬೇಕು ನರ
ಮೇಧಯಾಗದ ಕೊನೆಗೆ
ಕಾಲನ ನಾಲಗೆಯನ್ನೇ ಹವಿಸ್ಸಾಗಿಸಿದೆ ಕಾಲ
ಅಸುರನೆಂದು ಹೆಸರಿಸಿದರೂ ಸಾಕು
ಹುಲ್ಲು ಕೊಯ್ದಷ್ಟು ಸಲೀಸು.

ತೊಡೆ ಕತ್ತರಿಸಿಕೊಂಡ ವರ್ತಮಾನವೂ
ಕಂಡ ಭವಿಷ್ಯದ ಕನಸು ಬಾಯಾರಿ
ಬೊಗಸೆಗೆ ದಕ್ಕಿದ ಪಾತಾಳ ಗಂಗೆ.
ಉಕ್ಕದ ಬತ್ತದ ಮತ್ತೇರದ
ಆಳದೊರತೆ ಅಕ್ಕ, ಆರೀಫ
ಬಾಬಾ, ಷರೀಫ.

ಅಲ್ಲಮನ ಶೂನ್ಯವ ಅರಿತವರಾರಯ್ಯ
ಪ್ರಭು ಪವಡಿಸಿದ್ದಾನೆ ಸಿಂಹಾಸನದಲಿ
ಕುಬೇರರ ಸಂಗ ಭಂಗ ಬಾರದಂತೆ
ಕಾವಲಿಗಿದೆ ಪದ್ಮವ್ಯೂಹ

ಕಾರ್ಕೋಟಕದೆದಿರು
ತುಟಿಯಲ್ಲಿಷ್ಟು ಸಿಹಿ ಹೊತ್ತು ಸಾಗಿದ
ಇರುವೆ ಸಾಲು ರಾಜಬೀದಿಯಲಿ.
ಪ್ರಜಾಗಣದ ಮೇಲೆ ಜಾರಿಯಿದೆ ವಿದೇಯತೆಯ
ಕಡ್ಡಾಯ ಅನುಶಾಸನ.
ಘೋಷ ಹೊಮ್ಮಿದರೆ ಮರಣ ಶಾಸನ
ನೆತ್ತರಲಿ ನೆಂದರೇನಂತೆ ಮೈ
ಒಮ್ಮೆ ಕುಂಭದಲಿ ಮಿಂದೆದ್ದರೆ ಸಾಕು
ದಿವ್ಯ ಪಾವನ.

ಸುಮ್ಮನಿದ್ದೂ ಆಯಿತು.
ಹೆತ್ತವ್ವೆಯ ಮೇಲೆ ವೀರಕಲಿಗಳ ವೀರ್ಯಪಾತವ
ಕಂಡು ರೋಧಿಸಿದ್ದಾಯ್ತು.
ಕಿರುಬ ಕೇಸರಿಗಳು ಒಡ ಹುಟ್ಟಿದವಳ ಬಸಿರ ಬಗೆದಾಗ
ಕಣ್ಣೀರುಗರೆದದ್ದಾಯ್ತು
ಹುಟ್ಟಿದ ಮನೆಯಲ್ಲೇ ಅಪ್ಪನನು ಭಸ್ಮಾಸುರರು ಸುಡುವಾಗ
ನೆಲ ಮುಗಿಲುಗಳೊಂದಾಗಿ ಅತ್ತಿದ್ದಾಯ್ತು.

ಅಷ್ಟೇ…! ಇನ್ನೇನು ಮಾಡಲಿಕ್ಕಾಯ್ತು!!
ರೋದನ ವೇದನೆಗಳ ಹೊರತು.
ಇನ್ನು ಮಾಡುವುದಾದರೂ ಏನು, ಭಜನೆ ;
“ರಘುಪತಿ ರಾಘವ ರಾಜಾ ರಾಮ್
ಪತಿತ ಪಾವನ ಸೀತಾರಾಮ್”.

ಅಕ್ಕ ಸೀತೆಗೆ ಸಾವುಂಟೇ, ಆಕೆ
ಸುಟ್ಟು ಹೋದಳೇ?
ಸುಡಲು ಬಂದ ಬೆಂಕಿ ಸುಟ್ಟುಕೊಳ್ಳದೇ ತಾನು?
ನೀನು ಚಿರಂಜೀವಿಯಲ್ಲ ನಾನು ಅಮರನೂ ಅಲ್ಲ
ದೊರೆಯೇ, ತೈಮೂರನೋ ಹಿಟ್ಟಲರನೋ
ಬರೀ ಇತಿಹಾಸವಲ್ಲ, ಇತಿಹಾಸ ಬರಿದಲ್ಲ.

ಅಂಗೈಯಲ್ಲಿ ಹಣತೆ ಹಿಡಿದು ಬಂದ ಮಗಳು
ಕೇಳುತ್ತಾಳೆ; “ಅಪ್ಪಾ…
ಹೊದ್ದು ಕೊಳ್ಳುವ ಸೆರಗು, ಹೊದೆಯ ಬಾರದ ಹಿಜಾಬು
ವ್ಯತ್ಯಾಸವೇನು?”
ದೇಶ ಕೋಶಗಳ ಎದೆಗಾನಿಸಿಕೊಂಡ ಮಗ
ದುಃಖಿಸುತ್ತಾನೆ;
“ಓದಿಗಾಸರೆಯಾದ ಫೆಲೋಶಿಪ್ಪು ರದ್ದಾಯಿತಪ್ಪಾ”

ಕಣ್ಣಲ್ಲಿ ಮಿಂಚುತ್ತದೆ,
ಬಾಬಾ ಸಾಹೇಬರನ್ನು ಹೊತ್ತೊಯ್ದ ವಿಮಾನ
ನಮ್ಮ ಪಾಲಿಗಂತೂ ಇಲ್ಲ ಯಾವ ದೊರೆಯ ಕರುಣ
ಕಣ್ಣಲ್ಲಿ ಚಿಮ್ಮಿದ ನೀರು ಕಣ್ಣಲ್ಲೇ ದಹನ.

(ವಿಧಾನಸೌಧದ ಆವರಣದಲ್ಲಿ ನಡೆದ ಪುಸ್ತಕಮೇಳದ ಕವಿಗೋಷ್ಠಿಯಲ್ಲಿ ವಾಚಿಸಿದ ಕವಿತೆ)

-ಬಿ.ಪೀರ್ ಬಾಷ, ಹೊಸಪೇಟೆ