ಅನುದಿನ ಕವನ-೧೫೨೭, ಕವಿ: ಎ.ಎನ್.ರಮೇಶ್. ಗುಬ್ಬಿ, ಕವನದ ಶೀರ್ಷಿಕೆ:ಅಕ್ಷರ ಬಂಧು!!

“ಅಕ್ಷರಬಂಧು ನಿನಗಿದೋ ಅರ್ಪಣೆ ಈ ಭಾವಪ್ರಣತೆ”

ಹೆಚ್ಚೇನೂ ಹೇಳಲಾರೆ, ಇದು ನನ್ನಂತೆ ಬರೆಯುವ ಸಕಲ ಭಾವಜೀವಗಳ ಭಾವಸಂವೇದನೆಗಳ ಹೃದ್ಯಕವಿತೆ. ಬರೆವ ಜೀವಗಳನು ಹಾರೈಸುತ ನಿತ್ಯ ಓದಿ ಸತ್ಯ ಅಂತಃಕರಣ, ಅಕ್ಜರೆಗಳಿಂದ ಮೆಚ್ಚಿ, ಸದಾ ಹರಸುವ ಸಹೃದಯೀ ಅಕ್ಷರಬಂಧುವಿಗೆ ಅರ್ಪಿಸಿದ ಅಂತರಾಳದ ಅನಂತ ಪ್ರೀತ್ಯಾದರಗಳ ಭಾವಪ್ರಣತೆ. ಇಂದು ಈ ಅಂತರ್ಜಾಲ ಯುಗದಲ್ಲಿ ಅಸಂಖ್ಯ ಬರಹಗಾರರೂ ಅನುದಿನ ಬರೆಯುತ್ತಿದ್ದಾರೆಂದರೆ ಕಾರಣ, ಪ್ರೇರಣ ಅನುಕ್ಷಣ ಅಕ್ಕರೆಯಿಂದ ಅಕ್ಷರಗಳನ್ನು ಅವಿರತ ಆರಾಧಿಸುವ ಆತ್ಮೀಯ ಆಪ್ತ ಅಕ್ಷರಬಂಧುಗಳು. ಬರೆವ ಲೇಖನಿಗೆ ಅವರೇ ಚೈತನ್ಯ, ಅವರದೇ ಕಾರುಣ್ಯ ಅಂತಾರೆ ಕವಿ  ಎ.ಎನ್.ರಮೇಶ್.ಗುಬ್ಬಿ ಅವರು!

ಅಕ್ಷರ ಬಂಧು….!!

ಕವಿತೆಯಲ್ಲಿ
ಭಾವವಾಗಿ ಬೆರೆವ
ಪದ ಪದಗಳಲ್ಲೂ
ಸ್ವಾದ ಸವಿಯುವ

ಕಥೆಗಳಲ್ಲಿ
ಪಾತ್ರವಾಗಿ ನಲಿವ
ಪುಟ ಪುಟಗಳಲ್ಲಿ
ಜೀವ ತಳೆಯುವ

ಓದುಗ ಪ್ರಭು
ನೀನೆನ್ನ ಗುರು.!
ಬರೆವ ಮನಗಳಿಗೆ
ನೀ ತಂಪಿನಸೂರು.!

ನಿನ್ನಲಿ ಇಲ್ಲ
ಕ್ಲೇಶ ಈರ್ಷೆ
ಬೇಡದ ಕಾಡದ
ಕಟು ವಿಮರ್ಶೆ.!

ನಿನ್ನ ಅಕ್ಕರೆ
ಪ್ರೀತಿ ಹಾರೈಕೆ
ಲೇಖನಿಗೆ ಶಕ್ತಿ.!
ಬರೆಹದ ಸ್ಫೂರ್ತಿ.!

ಅಕ್ಕರದಿ ಅಕ್ಷರ
ಅಪ್ಪಿ ಆನಂದಿಸುವ
ನಿಷ್ಕಲ್ಮಶ ದೈವ.!
ನಿನಗಿದೋ ನಮನ
ಓ ಮಹಾನುಭಾವ.!!

-ಎ.ಎನ್.ರಮೇಶ್. ಗುಬ್ಬಿ.
—–