ಅನುದಿನ ಕವನ-೧೫೨೯, ಕವಿ: ನಾಗೇಶ ನಾಯಕ, ಸವದತ್ತಿ, ಕವನದ ಶೀರ್ಷಿಕೆ: ದೇವರಾಗುವುದು ಸುಲಭ

ದೇವರಾಗುವುದು ಸುಲಭ

ಉಳಿಪೆಟ್ಟು ತಿನ್ನುವ ಶಿಲೆಯಷ್ಟೇ
ದೇವರಾಗುವುದಿಲ್ಲ,
ಉಳಿಯನ್ನೂ ನಯವಾಗಿ
ಸಿಹಿಮಾತುಗಳಿಂದ ಕರಗಿಸಿಬಿಡುವ
ನಡೆದಾಡುವ ದೇವರುಗಳೂ ಉಂಟು
ಈ ನೆಲದ ಮೇಲೆ

ತಪ್ಪುಗಳನ್ನೆಲ್ಲ ಎತ್ತಿ ತೋರಿಸದಿದ್ದರೆ
ದೋಷಗಳನ್ನು ಖಂಡಿಸದೆ
ಅಪ್ಪಿ ಮುದ್ದಾಡಿಬಿಟ್ಟರೆ
ಇದಿರಿದಿರು ಸುಖಾಸುಮ್ಮನೆ
ಹಾಡಿ ಹೊಗಳಿಬಿಟ್ಟರೆ
ಇಲ್ಲಿ ದೇವರಾಗುವುದು ಬಲು ಸುಲಭ!

ದೇವರಾಗುವುದು ಅಷ್ಟು
ಕಷ್ಟವೇನಲ್ಲ ಬಿಡಿ,
ಕಣ್ಣು ಕಿವಿ ಬಾಯಿಗಳನ್ನು
ಸದಾ ಮುಚ್ಚಿಕೊಂಡಿದ್ದರೆ
ಕೆಲಸಗಳನ್ನೆಲ್ಲ ಮಾಡುವವರಿಗೆ
ನಯವಾಗಿ ಮೀಸಲಿಟ್ಟರೆ
ಹೆಜ್ಜೆ ಹೆಜ್ಜೆಗೂ ಹಣೆಮಣಿದು
ಬಹುಪರಾಕ್ ಹೇಳಿಬಿಟ್ಟರೆ
ಇಲ್ಲಿ ದೇವರಾಗುವುದು ತುಂಬ ಸುಲಭ!

ಇಲ್ಲಿ ದೇವರಾಗುವುದು
ನೀರು ಕುಡಿದಷ್ಟೇ ಸಲೀಸು…
ಆದರೆ ನೆನಪಿರಲಿ,
ಮನುಷ್ಯನಾಗುವುದಂತೂ
ವಿಪರೀತ ಕಷ್ಟ ಕಷ್ಟ!

¶-ನಾಗೇಶ್ ಜೆ. ನಾಯಕ, ಸವದತ್ತಿ