ಅರ್ಧಾಂಗಿಗೆ
ಗಮನಿಸಿಯೇ ಇರಲಿಲ್ಲ ನಾನು ಇಷ್ಟು ದಿನ
ನಿನ್ನ ಅಸ್ತಿತ್ವವನು,ನೀನಿದ್ದೆ
ನೀರಲ್ಲಿ ಬೆರೆತ ಸಕ್ಕರೆಯಂತೆ ಅಥವಾ
ಹಾಲಿನೊಳಗಿನ ತುಪ್ಪದಂತೆ!
ಕಾಣುವುದೇನೋ ನಾನೇ,ನೀನೋ
ಅದೃಶ್ಯ ರೂಪಿ-ಕಾಣಿಸದಂತೆ
ಸಕ್ಕರೆಯು ನೀರಿನಲಿ,ಹಾಗೆಯೇ
ನೀನಿರುವೆ
ನನ್ನ ರಕ್ತದಲಿ,ನರನಾಡಿಗಳಲಿ
ನನ್ನ ಅಂಗೋಪಾಂಗಗಳಲಿ,ವ್ಯಾಪಿಸುತ
ನನ್ನಲೊಂದಾಗಿ
ಮೊದಲ ದಿನ ಹೇಗೆ ಮೌನವೋ ಹಾಗೆಯೇ
ನಂತರವೂ ಮೌನವೇ,ನನ್ನ ಪಾಡಿಗೆ ನನ್ನ ಬಿಟ್ಟು
ಸಲಹಿದೆ ನೀನು ನನ್ನ
ಸಖಿಯಾಗಿ,ತಾಯಾಗಿ,ಮಗುವೂ ಆಗಿ
ಸಂತೈಸುತ್ತ ದುಃಖದಲಿ,ಮರೆವಂತೆ
ಕಾಣದ ಹಾಗೆ-ಖುಶಿ ಪಡುತ್ತ-ಆರಾಮದಲಿ
ಸಲಹಿದೆ ನಮ್ಮ ಮಕ್ಕಳ,ಹಾಗೆಯೇ
ಮನೆಯ ಹಸು,ನಾಯಿ,ಬೆಕ್ಕುಗಳ
ತೋಟದೊಂದೊಂದೂ ಸಸ್ಯಗಳ
ಉಪಚರಿಸಿದೆ ಬಂದೆಲ್ಲ ಅತಿಥಿಗಳ
ತನ್ನದೇ ತಂದೆ,ತಾಯಿ,ಆಪ್ತರನು
ಉಪಚರಿಸುವಂತೆ
ಸಹನಾ ಮೂರ್ತಿ ನೀನು,ಮಾತಿರದ
ಪ್ರತಿಮೆಯ ಹಾಗೆ ಸಹಿಸುತ್ತ
ನನ್ನೆಲ್ಲ ತಕರಾರುಗಳ ಕಿರಿಕಿರಿಯ
ಅಲೆಮಾರಿತನವ. ಈ ನಡುವೆ
ಯೌವನದ ಆಸೆಗಳ ಸದ್ದಿರದೆ ಸುಟ್ಟೆ
ಏನನ್ನೂ ಕೇಳದೆಯೆ ಎಲ್ಲವನೂ ಕೊಟ್ಟೆ
ಜೀವಕಂಟಿದ ಸಖಿ ನೀನು,ನೀನಿಲ್ಲದಿರೆ
ನಾನು ಬರಿ ಸೊನ್ನೆ,ಓ ಹೆಣ್ಣೆ
ನೀನಿರುವೆಯೆಂದೇ ನಾನು ಧ್ಯಾನಿಸಿದೆ ನನ್ನನ್ನೆ
ಅರ್ಧನಾರೀಶ್ವರನೆ ನಾನು; ನೀನಿರುವ ನನ್ನನ್ನೆ
ನೀನೇ ನನ್ನ ನಿನ್ನೆ,ಇಂದು
ನಾಳೆಯೆನ್ನುವ ಸನ್ನೆ.
-ಸುಬ್ರಾಯ ಚೊಕ್ಕಾಡಿ, ಸುಳ್ಯ