ಪರಿಚಯ ಸ್ನೇಹವಾಗುವ,
ಸ್ನೇಹ ಪ್ರೇಮವಾಗುವ ಘಟ್ಟದಲ್ಲಷ್ಟೇ
ಒಲವಿಗೊಂದಿಷ್ಟು ತೂಕ..
ಆಮೇಲೆ ಬದುಕು ಅಂಗಾತ ಬಿದ್ದ
ಜಿರಳೆಯಂತೆ.
ಕದಲಲಾರದೇ ಸುಮ್ಮನೇ ಒದ್ದಾಡುವ
ಅಸಹಾಯಕತೆ.
ಒಲವ ಬಿಟ್ಟು ಮುನ್ನಡೆದವರಿಗೂ ಗೊತ್ತು
ಎಲ್ಲ ಘನತೆಯನ್ನೂ ಕಳೆದು
ಪ್ರೇಮಿಯನ್ನು ಯಾರೋ ಆಗಿಸಿಬಿಡುವ
ಗೌರವವೇ ಇಲ್ಲದ ವಿದಾಯಗಳಷ್ಟೇ
ಬದುಕನ್ನು ಅಸಹನೀಯವಾಗಿಸುವುದು..
ಉತ್ತರಗಳೇ ಸಿಗದ ಪ್ರಶ್ನೆಗಳನ್ನೇ
ಎಲ್ಲ ಪುಟದಲ್ಲೂ ಬರೆದು ಒದ್ದಾಡಿ
ವಿಸ್ಕಿ ಗ್ಲಾಸಿನ ಅಂಚಲ್ಲಿ ಚಿನ್ನದ
ಪ್ರತಿಬಿಂಬದ ಎಳೆ ಹುಡುಕುವ
ಪ್ರೇಮಿಗಳು ಒಂದೆಡೆಯಾದರೆ,
ಪ್ರಶ್ನೆ ಕೇಳುವವರೇ ಇಲ್ಲದಿದರೂ
ಉತ್ತರಗಳ ರಾಶಿಯ ನಡುವ ಕೂತು
ಸಿಗರೇಟಿನ ಹೊಗೆಯಲ್ಲಿ
ವಿರಹದ ಕೆಂಡಕ್ಕೆ ಉಸಿರೂದುವ
ಪ್ರೇಮಿಗಳು ಇನ್ನೊಂದೆಡೆ..
ಬದುಕು ಹೆಚ್ಚೇನೂ ಸಂಕೀರ್ಣವಲ್ಲ..
ಸರಳಗೊಳಿಸಲು ಹೋದಾಗಲಷ್ಟೇ
ದಾರ ಗಂಟಾಗುವುದು.
ಹರಿವಿನಂತೇ ಸಾಗಬೇಕಿತ್ತು ಬದುಕು,
ಒಲವು, ನಲಿವುಗಳ ಕೂಡಿ ಕಳೆದು.
– ಸಮುದ್ಯತಾ ಕಂಜರ್ಪಣೆ