ಒಂದು
ನೋಟಕ್ಕಾಗಿ
ಹಂಬಲಿಸಿದಾಗೆಲ್ಲ
ಸ್ಟೀರಿಂಗ್ ಹಿಡಿದ
ಅವನಿಗೆ ಮೂರೇ ನಿಮಿಷಕ್ಕೆ
ಹದಿನೆಂಟು ಕಿಮಿ ದೂರದ ಮನೆ ಸಿಗುತ್ತದೆ
ಅಥವಾ
ಹದಿಮೂರು ಬಾರಿ
ತಮ್ಮ ತಂಗಿ ನಾದಿನಿ ಚಿಕ್ಕಪ್ಪ ಕರೆ ಮಾಡುತ್ತಾರೆ
ಅಥವಾ
ಯಾರಿಗೋ ಹುಷಾರು ತಪ್ಪಿ
ಎಮರ್ಜೆನ್ಸಿ ಬೀಳುತ್ತದೆ
ಹಣೆಯ ಮೇಲಿದ್ದ
ಆ ಹಳೆಯ ಕಲೆ ಕಾಣಲು
ಒಮ್ಮೆ ತಿರುಗಿದರೆ ಸಾಕು
ಅಂದುಕೊಳ್ಳುವ
ಅವಳ ಕಣ್ಣು
ಎಂದಿನಂತೆ
ಮಂಜು ಮಂಜು
ಪ್ರೀತಿಯ ಕವಿತೆಗಳೆಂದರೆ
ಇಷ್ಟೇ ಗೆಳತಿ
ಶಬ್ದಕ್ಕೆ ಹಚ್ಚಿದ ಅತ್ತರು
ಮತ್ತು
ಮೌನಕ್ಕೆ ಮೆತ್ತಿದ ನೆತ್ತರು
ಉಳಿದಂತೆ
ಮುಗಿವ ಮುನ್ನವೇ
ಸಂಭವಿಸುವ ಶೂನ್ಯ
-ನಂದಿನಿ ಹೆದ್ದುರ್ಗ
—–