ನಗೆಯ ನೋಟಕ್ಕೆ ಬೆಳದಿಂಗೊಂದು
ತಾಕಬೇಕಿತ್ತು, ಅವಳ ಅಸ್ತಿತ್ವಕ್ಕೆ
ಚೂರು ಸುಳಿವು ಕೊಡಬೇಕಿತ್ತು.
ಅದೆಷ್ಟೋ ರಣಗಾಯಗಳಿನ್ನೂ
ಹಸಿಯಾಗೇ ಇತ್ತು ಆದರೂ
ಒಂದೆರಡು ನೋವಗುಳಿಗೆಗಳ ನುಂಗಬೇಕಿತ್ತು.
ದಿಕ್ಕುಗಳಾಚೆ ಏನಿದೆ ಎಂದು ಒಮ್ಮೆಯಾದರೂ
ಹುಡುಕಬೇಕಿತ್ತು.ಪತನಗೊಂಡ
ಶಾಸನಗಳನು ಒಮ್ಮೆ ಪರಿಶೀಲಿಸಬೇಕಿತ್ತು.
ಅವನ ಹಕೀಕತ್ತಿನ ಜಗತ್ತಿನೊಳಗೆ
ಹೆಜ್ಜೆಗಳ ಲೆಕ್ಕವಿಡಬೇಕಿತ್ತು. ಯಾರೂ ನಡೆಯದ ದಾರಿಯೊಂದರಲಿ ನಡೆದು ದಾಖಲೆ ಮುರಿಯಬೇಕಿತ್ತು.
ನಾನೂ ಕೂಡ ಬೇಲಿ ದಾಟಿ ಅಂಚನೊಮ್ಮೆ ಮುಟ್ಟಿ ಬರಬೇಕಿತ್ತು. ಗೆದ್ದವರ ಬಳಿ ಸೋತ ಕಥೆಯೊಂದಕೆ
ಪಲ್ಲವಿ ಚರಣಗಳ ಹಾಡ ಬರೆಸಬೇಕಿತ್ತು.
ಇದ್ದು ಇಲ್ಲದಂತವರ ಗೋರಿಗೆ ಚಂದದೂಗಳ ತಂದು ಸುರಿಯಬೇಕಿತ್ತು.ಇಲ್ಲದೆಯೂ ಕನಸ ಕಾಯುವರ ಜೊತೆ ಬದುಕನಂಚಿ ಕೊಳ್ಳಬೇಕಿತ್ತು.
-ಮಂಜುಳಾ ಭಾರ್ಗವಿ, ಬೆಂಗಳೂರು
—–