ಅವಳಿಗೆ ನಡೆಯುವುದೂ ಕಷ್ಟ.
ನೀವು ಗಮನಿಸಿರಬೇಕು
ನಾನೂ ಗಮನಿಸಿದ್ದೇನೆ ಆಗಾಗ.
ಅವಳ ಬಳಿ ದೊಡ್ಡದೊಂದು
ಮೂಟೆಯೇ ಇದೆ..
ಅವಳ ಮುತ್ತಜ್ಜಿ ಅವಳ
ಅಜ್ಜಿಗೆ ಕೊಟ್ಟಿದ್ದು.
ಅವಳ ಅಜ್ಜಿ
ಅವಳಮ್ಮನಿಗೆ ಕೊಟ್ಟಿದ್ದು..
ಅವಳಮ್ಮ ಅವಳಿಗೆ ಕೊಟ್ಟಿದ್ದು..
ನಯ, ನಾಜೂಕು, ಭಯ, ಹಿಂಜರಿಕೆ,
ಮೃದುತ್ವ, ನಾಚಿಕೆ, ಅವಲಂಬನೆ, ಸಹನೆ..
ಎಲ್ಲವನ್ನೂ ಅವಳ ಮೂಟೆಯಲ್ಲಿ
ತುರುಕಲಾಗಿದೆ..
ಅಷ್ಟೂ ಮೂಟೆಗಳಲ್ಲಿ ಕೆಲವನ್ನು
ಬಿಡಲಾಗಿದೆ..
ಮತ್ತಷ್ಟನ್ನು ಸೇರಿಸಲಾಗಿದೆ.
ಈಗ ಅವಳು ಮತ್ತದೇ
ಮೂಟೆಯನ್ನು
ಅವಳ ಮಗಳಿಗೆ,
ಮಗಳು ಮೊಮ್ಮಗಳಿಗೆ
ಕೊಡುವ ಸಮಯ.
ಆದರೆ.. ಹಠಮಾರಿ ತಾಯಿ
ಮೂಟೆಯ ಹರಡಿ ಕೂತಿದ್ದಾಳೆ
ಕಿತ್ತೆಸೆಯುತ್ತಾ ಒಂದೊಂದನ್ನೇ..
ಮೂಟೆ ಖಾಲಿಯಾಗುತ್ತಿದ್ದಂತೇ
ಹೊಸತೇನೋ ತುಂಬುತ್ತಿದ್ದಾಳೆ..
ಆತ್ಮವಿಶ್ವಾಸ, ಧೈರ್ಯ, ಸ್ವಾತಂತ್ರ್ಯ,
ಗಟ್ಟಿತನ, ಶಕ್ತಿ, ಸ್ವಾಭಿಮಾನ..
ಈಗವಳ ಮಗಳಿಗಿತ್ತ ಮೂಟೆ
ಹಗುರಾಗಿದೆ.. ರೆಕ್ಕೆ ಬಿಚ್ಚುವಷ್ಟು..
ಮಗಳು ಮೊಮ್ಮಗಳಿಗಿತ್ತ ಮೂಟೆ
ಇನ್ನಷ್ಟು ಹಗುರ..
ಹಾರುವಷ್ಟು..
-ಸಮುದ್ಯತಾ ಕಂಜರ್ಪಣೆ