ಶಂಕರಘಟ್ಟ, ಮಾ.22: ಜಗತ್ತಿನ ಬಹುದೊಡ್ಡ ಆರ್ಥಿಕ ತಜ್ಞರಾದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂಶೋಧನೆ ಗೆ ಹೆಚ್ಚು ಒತ್ತುಕೊಟ್ಟವರು ಎಂದು ಖ್ಯಾತ ವಕೀಲರಾದ ಡಾ.ಸಿ.ಎಸ್.ದ್ವಾರಕನಾಥ್ ಅವರು ಹೇಳಿದರು. ಅವರು ಕುವೆಂಪುವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆ ಮತ್ತು ಸಂಶೋಧನಾ ನೆಲೆಗಳು ಎಂಬ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತಾಡಿದರು. ಮೀಸಲಾತಿ ಎನ್ನುವುದು ಪ್ರಾತಿನಿಧ್ಯ. ಇದು ಬಡತನವನ್ನು ನಿರ್ಮೂಲನೆ ಮಾಡುವ ಸಾಧನ ಎಂದು ಅಭಿಪ್ರಾಯ ಪಟ್ಟರು.
ಡಾ. ಅಂಬೇಡ್ಕರ್ ಅವರು ಪ್ರಸಿದ್ಧ ಜಲತಜ್ಞರು. ಜಲಪ್ರವಾಹವನ್ನು ಜೀವಜಗತ್ತಿಗೆ ಉಪಯುಕ್ತ ಗೊಳಿಸಬೇಕೆಂದವರು. ಅತ್ಯಂತ ಶ್ರೇಷ್ಠ ಮಹಿಳಾವಾದಿ.ಪ್ರತಿಯೊಬ್ಬರ ಮನೆಯಲ್ಲಿ ಆರಾಧನೆ ಒಳಪಡುವ ವ್ಯಕ್ತಿ, ರಾಷ್ಟ್ರೀಯ ವಾದಿ. ಸಾಮಾಜಿಕ ಮನಶಾಸ್ತ್ರಜ್ಞರು. ಪ್ರಾಣಿಗಳಿಗೆ, ಸಸ್ಯಗಳಿಗೆ ಬದುಕುವ ಹಕ್ಕು ನೀಡಿದವರು ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕುಲಸಚಿವರಾದ ಎ.ಎಲ್.ಮಂಜುನಾಥ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪರೀಕ್ಷಾಂಗ ಕುಲಸಚಿವರಾದ ಪ್ರೊ.ಎಸ್.ಎಂ.ಗೋಪಿನಾಥ್ ,ಹಣಕಾಸು ಅಧಿಕಾರಿ ಪ್ರೊ.ಎಚ್.ಎನ್.ರಮೇಶ್, ಸಂಪನ್ಮೂಲವ್ಯಕ್ತಿಗಳಾದ ಡಾ.ಅನಸೂಯಾ ಕಾಂಬ್ಳೆ, ಡಾ.ಎಚ್.ಟಿ.ಪೋತೆ ಭಾಗವಹಿಸಿದ್ದರು. ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಪ್ರಾಸ್ತಾವಿಕ ಮಾತಾಡಿದರು. ಎಂ.ಸಂಪತ್ ಕುಮಾರ್, ಓಬಳೇಶ್ ಟಿ. ಮಂಜುನಾಥಯ್ಯ, ಆರ್.ರವಿಕುಮಾರ್ ಇದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಸಂಶೋಧಕರು ಭಾಗವಹಿಸಿದ್ದರು.