ಯುವ ಸಮೂಹ ಮಹಾತ್ಮ ಗಾಂಧಿ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿ‌ಕೊಳ್ಳಬೇಕು -ನಾಡೋಜ ಡಾ. ವೋಡೋ ಪಿ.ಕೃಷ್ಣ

ಕೊಪ್ಪಳ, ಮಾ.24 : ಯುವ ಸಮೂಹ ಮಹಾತ್ಮ ಗಾಂಧಿ ಅವರ  ಚಿಂತನೆಗಳು ಹಾಗೂ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೋಡೋ ಪಿ.ಕೃಷ್ಣ  ಅವರು ಹೇಳಿದರು.

ಜಿಲ್ಲೆಯ ಯಲಬುರ್ಗಾ ಪಟ್ಟಣದ ವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ, ಯುವ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ರಾಷ್ಟ್ರೀಯ ಸೇವಾ ಯೋಜನೆ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, ರಾಷ್ಟ್ರೀಯ ಸೇವಾ ಯೋಜನೆ ಕೋಶ, ಕೊಪ್ಪಳ ವಿಶ್ವ ವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಧಿಕಾರಿಗಳಿಗೆ ಸೋಮವಾರ ಆಯೋಜಿಸಿದ್ದ ಗಾಂಧಿ ಚಿಂತನೆಗಳು ಮತ್ತು ಮಾನವೀಯ ಮೌಲ್ಯಗಳ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.                                               ಕೇಂದ್ರ ಸರ್ಕಾರ ಯುವಕರಲ್ಲಿ ಮಹಾತ್ಮ ಗಾಂಧಿಯವರ ಮೌಲ್ಯಗಳನ್ನು ಬಿತ್ತನೆ ಮಾಡಬೇಕು ಎಂದು ಈ ಯೋಜನೆ ಹಾಕಿಕೊಂಡಿದೆ. ಪರಿಣಾಮಕಾರಿ ಕೆಲಸ ಮಾಡುವಲ್ಲಿ ಎನ್ಎಸ್ಎಸ್ ಪ್ರಮುಖ ಪಾತ್ರ ವಹಿಸಿದೆ. ಜನಗಳ ನಡುವೆ ಇದ್ದು ಕಷ್ಟ ನಷ್ಟಗಳಿಗೆ ಶ್ರಮಿಸುವ ಸೇವೆಯೇ ಎನ್ಎಸ್ಎಸ್ ಉದ್ದೇಶವಾಗಿದೆ ಎಂದು ತಿಳಿಸಿದರು. ಗಾಂಧಿಯವರು ಸುಮಾರು 18 ರಚನಾತ್ಮಕ ಕಾರ್ಯ ಕೊಟ್ಟಿದ್ದಾರೆ. ಹಾಗಾಗಿ ಶೇ.65 ರಷ್ಟು ಭಾರತ ಹಳ್ಳಿಗಳಂದ ಕೂಡಿದೆ. ಹಳ್ಳಿಗಳ ಉದ್ದಾರ ಭಾರತದ ಉದ್ಧಾರ ಎಂದು ಗಾಂಧೀಜಿ ನಂಬಿದ್ದರು ಎಂದರು.

ಯುವಕರು ಗಾಂಧೀಜಿಯವರನ್ನು ಅನುಕರಿಸದೇ ಅನುಸರಿಸಬೇಕು. ಧೈರ್ಯವಂತರಲ್ಲಿ, ಅನ್ಯಾಯದ ವಿರುದ್ಧ ಹೋರಾಡುವರಲ್ಲಿ, ಪ್ರೀತಿಸುವರಲ್ಲಿ, ಸತ್ಯದ ಬಗ್ಗೆ ಧ್ವನಿ ಎತ್ತುವರಲ್ಲಿ ಗಾಂಧಿಯವರನ್ನು ನಾವು ನೋಡಬಹುದು. ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಮಾತನಾಡಿ, ಯುವಕರು ಜನ ಸಮುದಾಯದ ಹತ್ತಿರ ಹೋಗುವ ಮನಸ್ದಿತಿ ಬೇಕಾಗಿದೆ. ಅದನ್ನು ಎನ್ಎಸ್ಎಸ್ ಕಾರ್ಯಕ್ರಮ ತಿಳಿಸುತ್ತದೆ ಎಂದರು.                                                      ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹಾತ್ಮ ಗಾಂಧೀಜಿಯವರ ಕೊಡುಗೆ ಹಾಗೂ ಶ್ರಮ ಅಪಾರವಾಗಿದೆ. ಬ್ರಿಟಿಷ್ ಅಧಿಕಾರಿಗಳು ಗಾಂಧಿಯವರನ್ನು ಕಂಡರೆ ಭಯಭೀತರಾಗುತ್ತಿದ್ದರು ಕಾರಣ ಏನೆಂದರೆ ಅವರು ಜನರ ಮಧ್ಯೆ ಹೆಚ್ಚು ಇರುತ್ತಿದ್ದರು ಹಾಗೂ ಸರಳತೆ, ಅಹಿಂಸಾ ತತ್ವ, ದೇಶಪ್ರೇಮವನ್ನು ಅಳವಡಿಸಿಕೊಂಡಿದ್ದರು ಎಂದು‌ ವಿವರಿಸಿದರು.

ಭಾರತ ಬಹುಭಾಷಾ, ಬಹುಧರ್ಮ, ಬಹುಸಂಸ್ಕೃತಿಯ ದೇಶವಾಗಿದೆ. ಹಾಗಾಗಿ ಇಂದಿನ ಯುವ ಪೀಳಿಗೆ ದೇಶದ ಇತಿಹಾಸ, ಸ್ವಾತಂತ್ರ್ಯ ಹೋರಾಟದ ಕುರಿತು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಓದಬೇಕು, ತಿಳಿದುಕೊಳ್ಳಬೇಕು. ಗಾಂಧಿಯವರ ಅಹಿಂಸೆ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಪ್ಪಳ ವಿಶ್ವ ವಿದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮದ ಸಂಯೋಜನಾಧಿಕಾರಿ ಬಸವರಾಜ ಈಳಿಗನೂರ ಅವರು,  ರಾಷ್ಟ್ರೀಯ ಯೋಜನೆ ಗಾಂಧೀಜಿಯವರ ಕನಸಿನ ಕೂಸಾಗಿದೆ ಎಂದರು.

ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕಿ ಡಾ.ಅಬಿದ ಬೇಗಮ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ‌ಸಿ.ಐ.ಚಲವಾದಿ, ಬಳ್ಳಾರಿ ವಿಶ್ವ ವಿದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮದ ಸಂಯೋಜನಾಧಿಕಾರಿ ಡಾ.ಕುಮಾರ, ಎನ್ಎಸ್ಎಸ್ ಸಲಹಾ ಸಮಿತಿಯ ಸದಸ್ಯರಾದ ಡಾ‌.ಸಾದು ಸೂರ್ಯಕಾಂತ್, ಡಾ.ಸರಸ್ವತಿ, ಡಾ.ಅಶ್ವಿನಕುಮಾರ್ ಹಾಗೂ ಉಪನ್ಯಾಸಕರು, ಎನ್ಎಸ್ಎಸ್ ಕಾರ್ಯಕ್ರಮಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.