ಬಿಡದಿದ್ದರೆ…
ಅಸ್ತಿತ್ವವಿರುವುದು ಯಾರದ್ದೋ ಜೊತೆಗಿನ
ಪೈಪೋಟಿಯಲ್ಲಲ್ಲ, ಹೋಲಿಕೆಯಲ್ಲೂ ಅಲ್ಲ
ಗುಲಾಬಿಯೊಂದು ಅರಳಿದರೆ
ತಾವರೆಯಂತಿಲ್ಲವೆಂದು ಗೊಣಗುವುದಿಲ್ಲ
ಬೇವಿನ ಮರವೆಂದೂ ಮಾವಿನಮರಕ್ಕೆ
ತನ್ನನ್ನು ತಾನು ಹೋಲಿಸುವುದಿಲ್ಲ
ಬುವಿಗೆ ಸೂರ್ಯನಷ್ಟು ಸನಿಹವಿಲ್ಲವೆಂದು
ನಕ್ಷತ್ರಗಳು ಯಾವತ್ತೂ ಕೊರಗುವುದಿಲ್ಲ
ಯಾರೋ ಗುರುತು ಹಾಕಿಟ್ಟ ಮೈಲಿಗಲ್ಲ
ಮುಟ್ಟಲೆಂದು ಹುಚ್ಚರಂತೆ ಓಡಬೇಕಿಲ್ಲ
ಪ್ರತಿ ಜೀವಕ್ಕೂ ಒಂದು `ಛಂದ’ವಿದೆ,
ಲಯವಿದೆ ನಿಲ್ಲಲು, ನಡೆಯಲು, ಓಡಲು
ಪ್ರತಿ ಹೂವಿಗೂ ತನ್ನದೇ ಬಣ್ಣವಿದೆ
ಕಾಲವಿದೆ ಅರಳಲು, ಗಂಧ ಬೀರಲು
ಅತ್ತಿಯ ಹಣ್ಣು ಅಂಜೂರವಾಗಬೇಕಿಲ್ಲ
ಅಸ್ತಿತ್ವವಿರುವುದೇ ಸಹಜವಾಗಿರಲು,
ಬಿಡದಿದ್ದರೆ ಬಂಡೆದ್ದು ನಿರೂಪಿಸಲು!
-ಎಂ ಆರ್ ಕಮಲ, ಬೆಂಗಳೂರು
—–